ಗೋಣಿಕೊಪ್ಪಲು ಬಳಿಯ ದೇವರಪುರ ರಾಜ್ಯ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ದರೋಡೆ ಪ್ರಕರಣ | ಇದೀಗ ಇಬ್ಬರು ಪ್ರಮುಖ ಆರೋಪಿಗಳ ಬಂಧನ | ಇದುವರೆಗೆ ಒಟ್ಟು ಹತ್ತು ಆರೋಪಿಗಳ ಬಂಧನ

ಕೇರಳ ಮೂಲದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲಕ್ಷಾಂತರ ರೂಪಾಯಿಗಳನ್ನು ದರೋಡೆ ಮಾಡಿದ ಘಟನೆ ಸಂಬಂಧಿಸಿದಂತೆ ಇದೀಗ ಕೇರಳ ಮೂಲದ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದುವರೆಗೆ ಒಟ್ಟು ಹತ್ತು ಆರೋಪಿಗಳನ್ನು ಬಂಧಿಸಿ ಒಟ್ಟು ಎಂಟು ಲಕ್ಷ ರೂಪಾಯಿ ಹಾಗು ಕೃತ್ಯಕ್ಕೆ ಬಳಸಲಾದ 30 ಲಕ್ಷ ರೂಪಾಯಿ ಮೌಲ್ಯದ ಒಟ್ಟು ಐದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ರವರು ಗೋಣಿಕೊಪ್ಪಲಿನಲ್ಲಿ ಮಾಧ್ಯಮದೊಂದಿಗೆ ತಿಳಿಸಿದ್ದಾರೆ.

ಗೋಣಿಕೊಪ್ಪಲು ಹುಣಸೂರು ರಾಜ್ಯಹೆದ್ದಾರಿಯ ತಿತಿಮತಿ ಬಳಿಯ ದೇವರಪುರ ಎಂಬಲ್ಲಿ ಡಿಸೆಂಬರ್ 9ರಂದು ದರೋಡೆ ನಡೆದಿದ್ದು ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ನಿವಾಸಿ ಅಮ್ಜದ್ ಎಂಬುವರು ಚಿನ್ನದ ವ್ಯಾಪಾರಿ ಮೈಸೂರಿನ ಚಿನ್ನಾಭರಣ ಅಂಗಡಿಯೊoದಕ್ಕೆ ತಮ್ಮಲ್ಲಿದ್ದ ಚಿನ್ನವನ್ನು ಮಾರಾಟ ಮಾಡಿ ಸುಮಾರು 62 ಲಕ್ಷ ರೂಪಾಯಿಗಳ ಹಣವನ್ನು ತೆಗೆದುಕೊಂಡು ರಾತ್ರಿ ಮೈಸೂರಿನಿಂದ ಕೊಡಗಿನ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ದೇವರಪುರದ ಬಳಿ ಮೂರು ವಾಹನಗಳಲ್ಲಿ ಬಂದ ಸುಮಾರು 10ರಿಂದ 15 ಮಂದಿ ಇದ್ದ ದರೋಡೆಕೋರರು ಅಮ್ಜದ್ ಅವರ ಕಾರನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದ್ದರು. ಈ ಸಂಬಂಧ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ದರೋಡೆಕೋರರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಡಿವೈಎಸ್ಪಿ ಮೋಹನ್ ಕುಮಾರ್, ಗೋಣಿಕೊಪ್ಪಲು ವೃತ್ತದ ಹಿಂದಿನ ವೃತ್ತ ನಿರೀಕ್ಷಕರಾದ ಗೋವಿಂದರಾಜು, ಈಗಿನ ವೃತ್ತ ನಿರೀಕ್ಷಕರಾದ ಶಿವರಾಜ್ ಮುದ್ದು, ಗೋಣಿಕೊಪ್ಪಲು ಠಾಣಾಧಿಕಾರಿಗಳಾದ ರೂಪಾದೇವಿ ಹಾಗೂ ಪೊನ್ನಂಪೇಟೆ ತಾನಾಧಿಕಾರಿಗಳಾದ ನವೀನ್ ಕುಮಾರ್ ರವರನ್ನು ಈ ಸಂದರ್ಭ ರಾಮರಾಜನ್ ಪ್ರಶಂಶಿಸಿದರು.. ಗೋಣಿಕೊಪ್ಪಲು ಹಾಗೂ ಪೊನ್ನಂಪೇಟಿಯ ಅಪರಾಧ ಪತ್ತೆದಳದ 9 ಸಿಬ್ಬಂದಿಗಳು ಕಳೆದ ಒಂದು ತಿಂಗಳು ಕೇರಳದಲ್ಲಿ ತಂಗಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ತಮ್ಮ ಕಾರ್ಯ ಕ್ಷಮತೆಯನ್ನು ಪ್ರದರ್ಶಿಸಿದ್ದಾರೆ ಇವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದರು. ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು ಇವರನ್ನು ಬಂಧಿಸಲು ವಿಶೇಷ ತಂಡದ ಮೂಲಕ ಮತ್ತಷ್ಟು ಕಾರ್ಯಾಚರಣೆಯನ್ನು ನಡೆಸಲಾಗುವುದು. ಕೊಡಗು ಪೊಲೀಸ್ ಸಂಪೂರ್ಣವಾಗಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಜೈಲು ಗಟ್ಟುವುದು ಶತಸಿದ್ದ ಎಂದು ಹೇಳಿದರು. ದಕ್ಷಿಣ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಎಂ.ಬಿ.ಬೋರಲಿoಗಯ್ಯ ಅವರು ದರೋಡೆ ನಡೆದ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪೊಲೀಸರಿಗೆ ಈ ಹಿಂದೆ ಮಾರ್ಗದರ್ಶನವನ್ನು ನೀಡಿದ್ದರು.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ನಡೆದ ಬಾರಿ ಮೊತ್ತದ ರಸ್ತೆ ದರೋಡೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಜಿಲ್ಲಾ ಪೊಲೀಸ್ ಶೀಘ್ರದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Latest Indian news

Popular Stories