ಗೃಹಲಕ್ಷ್ಮಿ ಯೋಜನೆ ಯಶಸ್ಸಿಗೆ ಸರ್ಕಾರದ ಭರ್ಜರಿ ಸಿದ್ಧತೆ: ಸಿಎಂ ಸಿದ್ದರಾಮಯ್ಯ ಸಹಿತ ಸರ್ಕಾರದ ಹಲವು ಸಚಿವರು ಮೈಸೂರಿನಲ್ಲಿ ಮೊಕ್ಕಾಂ

ಮೈಸೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾದ ಮನೆಯ ಯಜಮಾನಿಯ ಖಾತೆಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ನಾಳೆ ಆಗಸ್ಟ್ 30ರಂದು ಉದ್ಘಾಟನೆಗೊಳ್ಳುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಹಿತ ಅರ್ಧ ಡಜನ್‌ ಸಚಿವರು ಮೈಸೂರಿನಲ್ಲಿ ಮೊಕ್ಕಾಂ ಹೂಡಲಿದ್ದಾರೆ. 

ಗೃಹಲಕ್ಷ್ಮೀ ಯೋಜನೆ ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳ ಪೈಕಿ ಮಹತ್ವದ್ದಾಗಿದೆ. ಅತಿ ಹೆಚ್ಚು ಫ‌ಲಾನುಭವಿಗಳು ಮಾತ್ರವಲ್ಲ, ಯೋಜನಾ ವೆಚ್ಚವೂ ಎಲ್ಲದಕ್ಕಿಂತ ಹೆಚ್ಚಿದೆ. ಲೋಕಸಭಾ ಚುನಾವಣೆಯನ್ನು ಸಹ ದೃಷ್ಟಿಯಲ್ಲಿಟ್ಟುಕೊಂಡು ಕೂಡ ಗೃಹಲಕ್ಷ್ಮೀ ಜಾರಿಗೆ ಕಾಂಗ್ರೆಸ್‌ ನಿರ್ಧರಿಸಿದ್ದು, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಮೈಸೂರಿನಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಇಂದು ಬೆಳಗ್ಗೆ 10.30ಕ್ಕೆ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಕಡಕೋಳ ಕೈಗಾರಿಕಾ ಪ್ರದೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 1.45ಕ್ಕೆ ಕೆ.ಆರ್ ಆಸ್ಪತ್ರೆಯ ಸುಟ್ಟ ಗಾಯಗಳ ನವೀಕರಣ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಮೈಸೂರು ಚಾಮರಾಜನಗರ ಶಾಸಕರುಗಳನ್ನು ಭೇಟಿ ಮಾಡಿ,ಸಂಜೆ 6 ಗಂಟೆಗೆ ವಕೀಲರುಗಳ ಸಂಘದ ಕಛೇರಿಗೆ ಭೇಟಿ ನೀಡುವರು.

ನಾಡಿದ್ದು ಬುಧವಾರ ಬೆಳಿಗ್ಗೆ 11 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಗೃಹ ಲಕ್ಷ್ಮಿ ಯೋಜನೆಯ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3,50 ಕ್ಕೆ ಸಿದ್ದಲಿಂಗಪುರದ ಕನಕ ಭವನ ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 6.30ಕ್ಕೆ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿರುವ ರಾಜೀವ ನಗರದ ಆಲ್ -ಬರ್ದ ಸರ್ಕಲ್ ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ರಾತ್ರಿ 7.30ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ.

Latest Indian news

Popular Stories