ಹಾಸನ ಪೆನ್’ಡ್ರೈವ್ ಪ್ರಕರಣ | ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿದ್ದು ಯಾಕೆ? – ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಲೈಂಗಿಕ ಹಗರಣ!

ಹಾಸನ ಪೆನ್‌ಡ್ರೈವ್‌ ಪ್ರಕರಣವು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಅಶ್ಲೀಲ ವಿಡಿಯೋಗಳಲ್ಲಿರುವುದು ಸಂಸದ ಪ್ರಜ್ವಲ್ ರೇವಣ್ಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗಿದೆ. ‘ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ’ ಎಂದು ಸಿದ್ದರಾಮಯ್ಯ ಉಲ್ಲೇಖಿಸಿರುವುದು ಅದನ್ನು ಸ್ಪಷ್ಟಪಡಿಸಿದೆ.

ಹೆಣ್ಣು ಮಕ್ಕಳನ್ನು ಪುಸಲಾಯಿಸಿ, ಆಮಿಷವೊಡ್ಡಿ, ಬೆದರಿಸಿ ತನ್ನ ಕಾಮವಾಂಚೆ ತೀರಿಸಿಕೊಂಡು, ಆ ಕೃತ್ಯಗಳನ್ನು ವಿಡಿಯೋ ಮಾಡಿಕೊಂಡಿರುವ ಆ ಕಾಮುಕ ಯುವನಾಯಕ ಪ್ರಜ್ವಲ್ ರೇವಣ್ಣ ಎಂಬುದು ವರದಿಯಾಗುತ್ತಿದ್ದಂತೆ, ರಾಷ್ಟ್ರಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಪ್ರಜ್ವಲ್‌ನನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಬಿಜೆಪಿ ವಿರುದ್ಧವೂ ರಾಷ್ಟ್ರಮಟ್ಟದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಕುಟುಂಬ ಮತ್ತು ಮೋದಿ ಅವರು ಜೊತೆಗಿರುವ ಚಿತ್ರವನ್ನು ಹಂಚಿಕೊಂಡು ಬಿಜೆಪಿ ಬೆಂಬಲಿಗರೂ ಸೇರಿದಂತೆ ಹಲವರು ಕಿಡಿಕಾರಿದ್ದಾರೆ.

ಹಾಸನ ಸಂಸದನ ಆಶ್ಲೀಲ ಕೃತ್ಯವನ್ನು ಮುಚ್ಚಿಟ್ಟು, ಆತನನ್ನು ಬೆಂಬಲಿಸಿದ ಬಿಜೆಪಿ ವಿರುದ್ಧ ಕಿಡಿಕಾರಿರುವ ಶಾಂತನು ಎಂಬವರು, “ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಸಂಸದನೂ ಆಗಿರುವ ಮತ್ತು ಈಗ ಹಾಸನ ಕ್ಷೇತ್ರದ ಅಭ್ಯರ್ಥಿ ಮತ್ತು ‘ಮೋದಿ ಕಾ ಪರಿವಾರ್’ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಹಲವಾರು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅವರ ಸುಮಾರು 3000 ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿದೆ. ಮಹಿಳಾ ಸಂಘಟನೆಗಳಿಂದ ದೂರು ಸ್ವೀಕರಿಸಿದ ನಂತರ ಕರ್ನಾಟಕ ಸರ್ಕಾರ ಎಸ್‌ಐಟಿ ರಚಿಸಿದೆ. ಕೆಲವು ದಿನಗಳ ಹಿಂದೆ, ರಾಹುಲ್ ಗಾಂಧಿ ಅವರು ಈ ದೇಶದ ‘ಶಕ್ತಿ’ (ಮಹಿಳೆಯರನ್ನು) ಅವಮಾನಿಸಿದ್ದಾರೆ ಎಂದು ಮೋದಿ ಸುಳ್ಳು ಆರೋಪಗಳನ್ನ ಮಾಡಿದ್ದರು. ಆದರೆ, ಈಗ ಮೋದಿ ಏಕೆ ಮೌನವಾಗಿದ್ದಾರೆ? 3000 ‘ಶಕ್ತಿ’ (ಮಹಿಳೆಯರನ್ನು) ದುರುಪಯೋಗ ಮಾಡಿಕೊಂಡಿದ್ದರೂ ಅವರನ್ನು ಮೋದಿ ಎನ್‌ಡಿಎ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಪ್ರಜ್ವಲ್ ಜರ್ಮನಿಗೆ ಪಲಾಯನ ಮಾಡಿದ್ದಾನೆ, ಈ ‘ಶಕ್ತಿ’ ನಿಂದನೆ ಮಾಡಿದವನನ್ನು ತಪ್ಪಿಸಿಕೊಳ್ಳಲು ಮೋದಿ ಸಹಾಯ ಮಾಡಿದ್ದಾರಾ” ಎಂದು ಪ್ರಶ್ನಿಸಿದ್ದಾರೆ.

ಅನ್ಶುಮನ್ ಶೈಲ್ ನೆಹ್ರು ಎಂಬವರು, “ನರೇಂದ್ರ ಮೋದಿಯವರ ಮೈತ್ರಿಕೂಟದ ಪಾಲುದಾರ ಮತ್ತು ಆಪ್ತ ಪ್ರಜ್ವಲ್ ರೇವಣ್ಣ ಅವರ ವಿರುದ್ಧ 200ಕ್ಕೂ ಹೆಚ್ಚು ವೀಡಿಯೊಗಳು ಮತ್ತು ದೂರುಗಳು ಹೊರಬಂದಿವೆ. ಆತ ದೇಶದಿಂದ ಓಡಿಹೋಗಿದ್ದಾರೆ. ಇದಕ್ಕೂ ಮುನ್ನ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ, ಸಂದೇಸ್ರಾ ಸಹೋದರರು ಸೇರಿದಂತೆ ಹಲವರು ಓಡಿ ಹೋಗಿದ್ದರು. ಪ್ರಜ್ವಲ್‌ ರೇವಣ್ಣನಿಂದ ಕಿರುಕುಳ ಅನುಭವಿಸಿದ ಸಂತ್ರಸ್ತರಾದ ಸಾವಿರಾರು ಮಹಿಳೆಯರಿಗೆ ಕಾಂಗ್ರೆಸ್ ನೇತೃತ್ವದ ಭಾರತ ಸರ್ಕಾರ ನ್ಯಾಯ ಒದಗಿಸಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಸಂಸತ್‌ನಿಂದ ಉಚ್ಛಾಟನೆಯಾಗಿದ್ದ ಟಿಎಂಸಿ ನಾಯಕಿ ಮೊಹುವಾ ಮೊಯಿತ್ರಾ ಅವರ ಬೆಂಬಲಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರಧಾನಿ, ಮುಂದಿನ ಬಾರಿ ನೀವು ಕರ್ನಾಟಕಕ್ಕೆ ಹೋದಾಗ, ದಯವಿಟ್ಟು ‘ಹಾಸನ ಲೈಂಗಿಕ ಹಗರಣದ ಕುರಿತು ಮಾತನಾಡಿ. ವರದಿಗಳ ಪ್ರಕಾರ, NDA ಅಭ್ಯರ್ಥಿ ಮತ್ತು ಎಚ್‌.ಡಿ ದೇವೇಗೌಡರ ಮೊಮ್ಮಗ  ಪ್ರಜ್ವಲ್ ರೇವಣ್ಣ ಅವರ 100 ಅಶ್ಲೀಲ ವೀಡಿಯೊಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿವೆ. ಆತ ವಿದೇಶಕ್ಕೆ ಓಡಿಹೋಗಿದ್ದಾನೆ. ಪ್ರಜ್ವಲ್ ರೇವಣ್ಣ ಮತ್ತು ಇತರ ಪ್ರಭಾವಿ ನಾಯಕರಿಂದ ಲೈಂಗಿಕ ಕಿರುಕುಳದ ಕುರಿತು ರಾಜ್ಯ ಮಹಿಳಾ ಆಯೋಗವು ಕಳವಳ ವ್ಯಕ್ತಪಡಿಸಿದ ನಂತರ ಕರ್ನಾಟಕ ಸರ್ಕಾರವು ಈ ವೀಡಿಯೊಗಳ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ.

“ಸುಮಾರು 3,000 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಜೆಡಿಎಸ್ ಮುಖಂಡ, ಹಾಸನ ಸಂಸದ ಹಾಗೂ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಜರ್ಮನಿಗೆ ಪರಾರಿಯಾಗಿದ್ದಾರೆ. ಮಲ್ಯ ಮತ್ತು ನೀರವ್ ಮೋದಿಗೆ ಸಹಾಯ ಮಾಡಿದ ಹಾಗೆ ಮೋದಿ ಅವರು ಪ್ರಜ್ವಲ್‌ಗೂ ಸಹಾಯ ಮಾಡಿದ್ದಾರಾ? ಈ ದೇಶದ ಸುಮಾರು 3,000 ‘ಶಕ್ತಿ’ (ಮಹಿಳೆಯರು) ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಬಗ್ಗೆ ಮೋದಿ ಏಕೆ ಮೌನವಾಗಿದ್ದಾರೆ” ಎಂದು ಗೌರವ್ ಎಂಬವರು ಪ್ರಶ್ನಿಸಿದ್ದಾರೆ.

“ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿಲಾಗಿದೆ. ಆತ ಸರ್ಕಾರಿ ಅಧಿಕಾರಿಗಳಿಂದ ಹಿಡಿದು ತಮ್ಮ ಪಕ್ಷದ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಆದರೂ, ಭಕ್ತರು ಮೌನವಾಗಿದ್ದಾರೆ. ಅದೇ, ಪ್ರಜ್ವಲ್ ಸ್ಥಾನದಲ್ಲಿ ಜಮೀರ್ ಖಾನ್ ಅಥವಾ ಇನ್ನಾವುದೇ ಮುಸ್ಲಿಂ ನಾಯಕರಿದ್ದರೆ ಆಕ್ರೋಶವನ್ನು ಹೇಗಿರುತ್ತಿತ್ತು. ಅಪರಾಧಿ ಮುಸ್ಲಿಮರಾದಾಗ ಮಾತ್ರ ಭಕ್ತರ ಆಕ್ರೋಶ ಹೊರಬರುತ್ತದೆ” ಎಂದು ಅನೀಸ್ ಎಂಬವರು ಕಿಡಿಕಾರಿದ್ದಾರೆ.

Latest Indian news

Popular Stories