ಬೆಳಗಾವಿ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ

ಬೆಳಗಾವಿ: ಬಿಸಿಲಿನಿಂದ ಬಸವಳಿದಿದ್ದ ಬೆಳಗಾವಿ ಜನತೆಗೆ ಶನಿವಾರ ಮಳೆರಾಯ ತಂಪೆರೆದಿದ್ದು, ಮಳೆ ಆಗಮನದಿಂದ ಜನರು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.

ಬರದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆಗಮನದಿಂದ ಸಾರ್ವಜನಿಕರು ಸಮಾಧಾನವಾಗಿದ್ದಾರೆ. ಭಾರೀ ಮಳೆ ಆಗಮನದಿಂದ ಇಳೆ ತಂಪಾಗಿದ್ದು, ರೈತರ ಮೊಗದಲ್ಲಿ ಸಂತಸವಾಗಿದೆ. ಈ ವರ್ಷದ ಅತ್ಯಂತ ಜೋರಾದ ಮಳೆ ಸುರಿದಿದೆ.

ಮಧ್ಯಾಹ್ನ 4 ಗಂಟೆ ನಂತರ ನಗರದಲ್ಲಿ ಆರಂಭವಾದ ಬಿರುಗಾಳಿ-ಮಳೆಗೆ ಜನರು ಪರದಾಡಿದರು. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಮಳೆ ಸುರಿಯಿತು. ಜೋರಾಗಿ ಬೀಸಿದ ಬಿರುಗಾಳಿಯಿಂದ ಗಿಡದ ಟೊಂಗೆಗಳು ಮುರಿದು ಬಿದ್ದವು. ಗುಡುಗು-ಸಿಡಿಲು ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ಭೇಂಡಿ ಬಜಾರ್‌ನಲ್ಲಿ ಗಿಡವೊಂದು ಧರೆಗುರುಳಿದೆ.
ನಗರದ ಹಲವು ರಸ್ತೆಗಳು ಹೊಳೆಯಂತೆ ಆಗಿದ್ದವು. ಅನೇಕ ಕಡೆಗಳಲ್ಲಿ ಸಣ್ಣ ಪುಟ್ಟ ಗಿಡಗಳು ಧರೆಗುರುಳಿದವು. ಗಾಳಿಯಿಂದ ಕೆಲವು ಕಡೆಗೆ ಮನೆಗಳ ಮೇಲಿನ ಪತ್ರೆಗಳು ಹಾರಿ ಹೋದವು. ಶಾಸ್ತಿç ನಗರದ ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಕೆಲವು ಅಂಗಡಿ-ಮಳಿಗೆಗಳಲ್ಲೂ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಪ್ರತಿ ಸಲ ಮಳೆಯಾದಾಗ ಭೇಂಡಿ ಬಜಾರ್, ಪಾಂಗುಳ ಗಲ್ಲಿಯಲ್ಲಿ ಗಟಾರು ನೀರೆಲ್ಲ ರಸ್ತೆ ಮೇಲೆ ಹರಿದು ಬರುವುದು ಸಾಮಾನ್ಯವಾಗಿದೆ. ಶನಿವಾರ ಸುರಿದ ಧಾರಾಕಾರ ಮಳೆಯಿಂದ ಗಟಾರು ನೀರೆಲ್ಲ ರಸ್ತೆ ಮೇಲೆ ಹೊಳೆಯಂತೆ ಹರಿದು ಅವಾಂತರ ಸೃಷ್ಟಿಸಿತು.

ಹುಬ್ಬಳ್ಳಿ ನಗರದಲ್ಲಿ ಸುರಿದ ಬಾರಿ ಗುಡುಗು-ಸಿಡಿಲು ಮಿಶ್ರಿತ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ, ಜೊತೆಗೆ ನಗರದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ನಾಲಾಗಳು ತುಂಬಿಕೊಂಡು ರಸ್ತೆಯ ಮೇಲೆಲ್ಲಾ ನೀರು ಹರಿದ ಘಟನೆ ಶನಿವಾರ ನಡೆದಿದೆ.
ನಗರದಲ್ಲಿ ಸುರಿದ ರಭಸದ ಮಳೆಗೆ ಹಲವು ಕಡೆ ಗಿಡ-ಮರಗಳು ನೆಲಕ್ಕುರುಳಿದ್ದು, ರಸ್ತೆಯ ಮೇಲೆಲ್ಲಾ ನೀರು ನಿಲ್ಲುವ ಮೂಲಕ ಸಂಪೂರ್ಣ ಜಲಾವೃತಗೊಂಡಿರುವುದು ಕಂಡು ಬಂದಿತು.
ನಗರದ ದಾಜೀಬಾನ ಪೇಟೆ, ತುಳಜಾಭವಾನಿ ವೃತ್ತದಿಂದ ಕಮರಿಪೇಟೆ, ದಿವಟೆಗಲ್ಲಿ, ಮಹಾವೀರಗಲ್ಲಿ, ಕೋಯಿನ್ ರಸ್ತೆ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಸ್ಟೇಶನ್ ರಸ್ತೆ, ವಿದ್ಯಾನಗರ, ಉಣಕಲ್ಲ ಕ್ರಾಸ್, ಕಿತ್ತೂರ ಚೆನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣದ ಮುಂಭಾಗ, ಹಳೇಹುಬ್ಬಳ್ಳಿ ಗಣೇಶ ನಗರ, ಆನಂದ ನಗರ ತಗ್ಗು ಪ್ರದೇಶ, ಪಡದಯ್ಯನ ಹಕ್ಕಲು, ನೇಕಾರನಗರ, ಜಂಗ್ಲಿಪೇಟೆ, ಸಿದ್ದಾರೂಢಸ್ವಾಮಿ ಮಠದ ಹಿಂಭಾಗ, ಸಿಮ್ಲಾ ನಗರ ಮುಖ್ಯ ರಸ್ತೆ, ಗದಗ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿ ಅಪಾರ ಪ್ರಮಾಣ ನೀರು ನಿಂತಿರುವುದು ಕಂಡು ಬಂದಿದೆ.
ಅಷ್ಟೇ ಅಲ್ಲದೇ ದೇಶಪಾಂಡೆ ನಗರದ ದೊಡ್ಡ ನಾಲಾ ತುಂಬಿ ಹರಿದಿದ್ದು, ನಾಲಾ ತುಂಬಿ ಸುಮಾರು 2-3 ಅಡಿ ನೀರು ಹೊರ ಬಂದಿರುವುದು ಕಂಡು ಬಂದಿತು. ಇದರಿಂದ ಅಕ್ಕಪಕ್ಕದ ಬಡಾವಣೆಗಳಲ್ಲಿ ಸಹ ನೀರು ನುಗ್ಗಿರುವುದು ಕಂಡು ಬಂದಿತು.

Latest Indian news

Popular Stories