ಅತ್ಯಾಚಾರ ಆರೋಪ ಪ್ರಕರಣ: ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಹಾಸನ, ಮೇ 11: ಅತ್ಯಾಚಾರ ಆರೋಪ ಪ್ರಕರಣದಲ್ಲಿ (Rape case) ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡಗೆ (Devarajegowda) 14 ದಿನ ನ್ಯಾಯಾಂಗ ಬಂಧನ ವಿಧಿಸಿ ಪ್ರಿನ್ಸಿಪಲ್‌ ಸಿ.ಜೆ‌, ಜೆಎಂಎಫ್‌ಸಿ ಜಡ್ಜ್​ ಸಿದ್ದರಾಮ.ಎಸ್‌ ಆದೇಶ ಹೊರಡಿಸಿದ್ದಾರೆ. ಹೊಳೆನರಸೀಪುರದ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ಅತ್ಯಾಚಾರ ಕೇಸ್ ದಾಖಲಾಗ್ತಿದ್ದಂತೆ ದೇವರಾಜೇಗೌಡ ಲಾಕ್ ಆಗಿದ್ದು, ಚಿತ್ರದುರ್ಗದ ಹಿರಿಯೂರು ಬಳಿ ವಶಕ್ಕೆ ಪಡೆಯಲಾಗಿತ್ತು. ಬೆಳಗ್ಗೆ 5.30ಕ್ಕೆ ಹೊಳೆನರಸೀಪುರಕ್ಕೆ ಕರೆತರಲಾಗಿತ್ತು.
ನಿನ್ನೆ ಸಂಜೆ ಮತ್ತೆರೆಡು ಆಡಿಯೋ ರಿಲೀಸ್‌ ಮಾಡಿದ್ದ ದೇವರಾಜೇಗೌಡ, ವಿಡಿಯೋ ಕೂಡಾ ಹರಿ ಬಿಟ್ಟಿದ್ದರು. ಇದಾದ ಎಂಟೇ ನಿಮಿಷದಲ್ಲಿ ಮೊಬೈಲ್‌ ಲೋಕೇಶನ್‌ ಆಧಾರದಲ್ಲಿ ದೇವರಾಜೇಗೌಡನನ್ನ ನಿನ್ನೆ ರಾತ್ರಿ ಲಾಕ್‌ ಮಾಡಲಾಗಿತ್ತು. ಇವತ್ತು ಹೊಳೆನರಸೀಪುರದಲ್ಲಿ ತೀವ್ರ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ. ಆದರೆ ಆರೋಪ ತಳ್ಳಿಹಾಕಿರುವ ದೇವರಾಜೇಗೌಡ ಸತ್ಯಕ್ಕೆ ಜಯ ಸಿಗುತ್ತೆ ಎಂದಿದ್ದರು.

ಸದ್ಯ ದೇವರಾಜೇಗೌಡ ವಿಚಾರಣೆ ಮುಗಿಸಿ ಪೊಲೀಸರು, ವೈದ್ಯಕೀಯ ಚಿಕಿತ್ಸೆಗೊಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ದೇವರಾಜೇಗೌಡರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

ದೇವರಾಜೇಗೌಡ ಬಂಧನಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೊಂದು ರಾಜಕೀಯ ಬಂಧನ ಎಂದಿರೋ ಬಿಜೆಪಿ ಕಲಿಗಳು, ಮತ್ತಷ್ಟು ಸಾಕ್ಷ್ಯಗಳು ಹೊರಬರುತ್ತೆಂಬ ಭಯದಿಂದ ದೇವರಾಜೇಗೌಡರನ್ನ ಬಂಧಿಸಿದ್ದಾರೆ ಅಂತಾ ಆರೋಪಿಸಿದ್ದಾರೆ. ದೇವರಾಜೇಗೌಡ ಬಂಧನದ ಹಿಂದೆ ದೊಡ್ಡವರಿದ್ದಾರೆ. ರಾಜಕೀಯ ಬಂಧನ ಎಂಬ ಆರೋಪಕ್ಕೆ ಕೈ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್‌ ಮೇಲೇಕೆ ಗೂಬೆ ಕೂರಿಸೋದು ಅಂತಾ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

Latest Indian news

Popular Stories