ಜಾದವ್‌ಪುರ ವಿಶ್ವವಿದ್ಯಾನಿಲಯದ ಮೃತ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಮುಖ್ಯ ಹಾಸ್ಟೆಲ್‌ನ ಎರಡನೇ ಮಹಡಿಯ ಕಾರಿಡಾರ್‌ನಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿರುವುದು ತನಿಖೆಯಿಂದ ಸಾಬೀತಾಗಿದೆ. ಅವನು ಕಟ್ಟಡದಿಂದ ಬಿದ್ದು ಸಾಯುವ ಕೆಲವು ನಿಮಿಷಗಳ ಮೊದಲು ರ಼್ಯಾಂಗಿಂಗ್ ನಡೆದಿರುವುದು ಕೋಲ್ಕತ್ತಾ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತ ವಿದ್ಯಾರ್ಥಿ “ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ” ಎಂದು ತನಿಖೆಯಿಂದ ಸಾಬೀತಾಗಿದೆ. ಯುನಿವಾರ್ಸಿಟಿಯ ಈಗಿನ ಮತ್ತು ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಬಂಧಿತ 12 ಜನರು ಕೃತ್ಯದಲ್ಲಿ “ಸಕ್ರಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಮೃತ ವಿದ್ಯಾರ್ಥಿ ಇವರ ಉಪಟಳದಿಂದ ಬಳಲಿದ್ದ, ಲೈಂಗಿಕ ಕಿರುಕುಳಕ್ಕೂ ಒಳಗಾಗಿದ್ದ ಎಂಬ ಅಂಶ ತನಿಖೆಯಲ್ಲಿ ಕಂಡು ಬಂದಿದೆ.. ಕೊಠಡಿ ಸಂಖ್ಯೆ 70 ರಲ್ಲಿ ಬಲವಂತವಾಗಿ ವಿವಸ್ತ್ರಗೊಳಿಸಿ ನಂತರ ಕಾರಿಡಾರ್‌ನಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು. ನಮ್ಮ ಬಳಿ ಸಾಕ್ಷ್ಯವಿದೆ” ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಕೋಲ್ಕತ್ತಾ ಪೊಲೀಸ್ ತನಿಖಾಧಿಕಾರಿಗಳು ಬಂಧಿತ ಆರೋಪಿಗಳಲ್ಲಿ ಒಬ್ಬರು ರಚಿಸಿದ ವಾಟ್ಸಾಪ್ ಗ್ರೂಪ್ ಅನ್ನು ಕಂಡು ಹಿಡಿದಿದ್ದಾರೆ, ಇದು “ಪೊಲೀಸರನ್ನು ತಪ್ಪುದಾರಿಗೆಳೆಯಲು” ಮಾಡಲಾಗಿದೆ ಎಂದು ಹೇಳಿದ್ದಾರೆ.
“ಬಂಧಿತರು ರ್ಯಾಗಿಂಗ್ ಕೃತ್ಯವನ್ನು ಮರೆಮಾಚಿ ಪೊಲೀಸರನ್ನು ತಪ್ಪುದಾರಿಗೆಳೆಯಲು ಯೋಜಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ” ಎಂದು ಅಧಿಕಾರಿ ಹೇಳಿದರು.
ಮಂಗಳವಾರ, ಆಗಸ್ಟ್ 9 ರ ಘಟನೆಯ ಬಗ್ಗೆ ಹೆಚ್ಚಿನದನ್ನು ಕಂಡುಹಿಡಿಯಲು ಪೊಲೀಸರು ಹಾಸ್ಟೆಲ್‌ನ ಅಡುಗೆಯವರನ್ನು ಪ್ರಶ್ನಿಸಿದ್ದಾರೆ.
ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಯುನಿವಾರ್ಸಿಟಿಯ ಇತರ ಇಬ್ಬರು ವಿದ್ಯಾರ್ಥಿಗಳಿಗೆ ಸಮನ್ಸ್ ನೀಡಲಾಗಿದೆ.
ಆಗಸ್ಟ್ 9 ರ ರಾತ್ರಿ ಕ್ಯಾಂಪಸ್ ಬಳಿಯ ಮುಖ್ಯ ಬಾಲಕರ ಹಾಸ್ಟೆಲ್‌ನ ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದ.
ಆತ ರ್ಯಾಗಿಂಗ್ ಮತ್ತು ಲೈಂಗಿಕ ಕಿರುಕುಳಕ್ಕೆ ಬಲಿಯಾಗಿದ್ದಾನೆ ಎಂದು ಆತನ ಕುಟುಂಬದವರು ಆರೋಪಿಸಿದ್ದರು. ಇದೀಗ ತನಿಖೆಯಿಂದ ಸತ್ಯ ಬಹಿರಂಗಗೊಳ್ಳುತ್ತಿದೆ.