ಸಂಸತ್ ನಲ್ಲಿ ಭಾರೀ ಭದ್ರತಾ ಲೋಪ ಪ್ರಕರಣ: ಆರೋಪಿ ಮನೋರಂಜನ್ ಪ್ರತಾಪ್ ಸಿಂಹ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ- ಎಂ. ಲಕ್ಷ್ಮಣ್

ಬೆಂಗಳೂರು: ಸಂಸತ್ ಭವನಕ್ಕೆ ನುಗ್ಗಿದ್ದ ಆರೋಪಿ ಮನೋರಂಜನ್ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಆರೋಪಿಗಳಾದ ಸಾಗರ್ ಶರ್ಮ, ಮನೋರಂಜನ್ ಮತ್ತು ಲಲಿತ್ ಝಾ, ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಅವರ ಜೊತೆಯೇ ಮೂರು ಬಾರಿ ಸಭೆ ನಡೆಸಿದ್ದಾರೆ. ಪೊಲೀಸರು ಈ ಕೂಡಲೇ ಪ್ರತಾಪ್ ಸಿಂಹ ಅವರ ಕಚೇರಿಯನ್ನು ಸೀಲ್ ಮಾಡಿ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿರುವ ಮನೋರಂಜನ್ ಅವರ ತಂದೆಯೇ ಒಪ್ಪಿಕೊಂಡಿರುವಂತೆ. ಆರೋಪಿ ಮೋದಿ ಭಕ್ತನಾಗಿದ್ದ, ಆರೋಪಿ ಹಾಗೂ ಅವರ ತಂದೆ ಬಿಜೆಪಿ ಬೆಂಬಲಿಗರು. ಪ್ರತಾಪ್ ಸಿಂಹನ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಪ್ರತಾಪ್ ಸಿಂಹ ಆರೋಪಿಗೆ 3 ಬಾರಿ ಪಾಸ್ ನೀಡಿದ್ದರು. ಆರೋಪಿ ಹಾಗೂ ಆತನ ಕುಟುಂಬಸ್ಥರು ಪ್ರತಾಪ್ ಸಿಂಹ ಅವರಿಗೆ ಚಿರಪರಿಚಿತರು ಹಾಗೂ ಆತ್ಮೀಯರು. ಹೀಗಿರುವಾಗ ಇದು ರಾಜ್ಯ ಬಿಜೆಪಿ ಪ್ರಾಯೋಜಿತ ದಾಳಿ ಅಲ್ಲವೇ? ಪ್ರತಾಪ್ ಸಿಂಹ ಹಾಗೂ ಆರೋಪಿಗಳಿಗೆ ನಿಕಟ ಸಂಬಂಧವಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಸಂಸದರನ್ನು ಉಚ್ಛಾಟನೆ ಮಾಡಲಿಲ್ಲವೇಕೆ? ಎಂದು ಪ್ರಶ್ನಿಸಿದೆ.

ಸಂಸತ್ ದಾಳಿಯ ಬಗ್ಗೆ, ದಾಳಿಯ ಹಿಂದಿರುವ ಪ್ರತಾಪ್ ಸಿಂಹನ ಪಾತ್ರದ ಬಗ್ಗೆ ಮಾತಾಡಲೇಬಾರದು ಎಂದು ಕಟ್ಟಪ್ಪಣೆಯಾಗಿದೆಯೇ? ದೇಶವನ್ನೇ ದಿಗ್ಭ್ರಮೆಗೊಳಿಸಿದ ಸಂಸತ್ ದಾಳಿಯ ಬಗ್ಗೆ ಬಿಜೆಪಿ ಗಪ್ ಚುಪ್ ಆಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಇದು ಬಿಜೆಪಿಯೇ ಪ್ರಾಯೋಜಿಸಿದ ದಾಳಿ ಎಂಬ ಅನುಮಾನ ದೃಢವಾಗುತ್ತಿದೆ ಎಂದು ಆರೋಪಿಸಿದೆ.

ಯಾವುದೋ ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇದೆ ಎಂದು ಭಯಂಕರ ಬಾಯಿ ಬಡಿದುಕೊಂಡಿದ್ದ ಬಿಜೆಪಿಗರು ದೇಶದ ಸಂಸತ್ ಮೇಲಿನ ದಾಳಿಯ ಬಗ್ಗೆ ಮೌನವಹಿಸಿದ್ದಾರೆ. ಪ್ರತಾಪ್ ಸಿಂಹ ಆರೋಪಿಗಳಿಗೆ 3 ಬಾರಿ ಪಾಸ್ ನೀಡಿದ್ದರೂ ಯಾವೊಬ್ಬ ಬಿಜೆಪಿಗರಿಗೂ ತಪ್ಪು ಎನಿಸಲಿಲ್ಲ ಎಂದರೆ ಏನರ್ಥ? ಇದು ಬಿಜೆಪಿ ಪ್ರಾಯೋಜಿಸಿದ ದಾಳಿ ಎಂಬ ಅನುಮಾನವಾಗಿದೆ. ರಾಜ್ಯ ಬಿಜೆಪಿ ನಾಯಕರ ಮೌನವೇ ಸಾಕ್ಷಿಯಾಗಿ ನಿಲ್ಲುತ್ತಿದೆ ಎಂದು ಟೀಕಿಸಿದೆ.

ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ. ಪ್ರತಾಪ್ ಸಿಂಹ ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ? ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ? ಎಂದು ಪ್ರಶ್ನಿಸಿದೆ.

ದಾಳಿಕೋರರ ಮೇಲೆ UAPAಯಂತಹ ಗಂಭೀರ ಪ್ರಕಾರಣ ದಾಖಲಿಸಲಾಗಿದೆ, ಅಪರಾಧಕ್ಕೆ ಸಹಕಾರ ನೀಡಿದವರನ್ನೂ ತನಿಖೆಗೆ ಒಳಪಡಿಸುವುದು ಸಹಜ ಕಾನೂನು ಪ್ರಕ್ರಿಯೆ. ಇಂತಹ ಸಹಜ ಕಾನೂನು ಪ್ರಕ್ರಿಯೆಯನ್ನೂ ಮಾಡದೆ ಪ್ರತಾಪ್ ಸಿಂಹರವರ ರಕ್ಷಣೆಗೆ ನಿಂತಿರುವುದೇಕೆ? ಕೇವಲ ಭದ್ರತಾ ಲೋಪ ಎನ್ನುವುದನ್ನು ಬಿಂಬಿಸಿ ಕೇಂದ್ರ ಸರ್ಕಾರ. ಕೈ ತೊಳೆದುಕೊಳ್ಳಲು ಹೊರಟಿರುವುದೇಕೆ ಎಂದು ಟೀಕಿಸಿದೆ.

Latest Indian news

Popular Stories