ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ | ಐವರು ನಾಗರಿಕರು ಮೃತ್ಯು

ಇಂಫಾಲ್: ಮಣಿಪುರದಲ್ಲಿ ನಡೆದ ಎರಡು ಪ್ರತ್ಯೇಕ ಘರ್ಷಣೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಐವರು ನಾಗರಿಕರನ್ನು ಕೊಂದಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಪೊಲೀಸರ ಹೇಳಿಕೆಯ ಪ್ರಕಾರ, ಬಿಷ್ಣುಪುರ್ ಜಿಲ್ಲೆಯ ನಿಂಗ್‌ತೌಖೋಂಗ್ ಖಾ ಖುನೌದಲ್ಲಿ ನಾಲ್ವರು ನಾಗರಿಕರು ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಯ ಕಾಂಗ್‌ಚುಪ್ ಚಿಂಗ್‌ಖಾಂಗ್‌ನಲ್ಲಿ ಓರ್ವನನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕೊಂದಿದ್ದಾರೆ ಎಂದು ಹೇಳಿದ್ದಾರೆ.

ಬಿಷ್ಣುಪುರ ಜಿಲ್ಲೆಯಲ್ಲಿ ಹತ್ಯೆಗೀಡಾದ ನಾಲ್ವರು ನಾಗರಿಕರ ಹಂತಕರನ್ನು ಬಂಧಿಸಲು ಸರ್ವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಓಯಿನಮ್ ಬಮೊನ್‌ಜಾವೊ ಸಿಂಗ್ (61), ಅವರ ಮಗ ಒಯಿನಮ್ ಮಣಿತೊಂಬ ಸಿಂಗ್ (32), ಥಿಯಂ ಸೋಮೇಂದ್ರೊ ಸಿಂಗ್ (55) ಮತ್ತು ನಿಂಗ್‌ತೌಜಮ್ ನಬದ್ವೀಪ್ ಸಿಂಗ್ (40) ಎಂದು ಗುರುತಿಸಲಾಗಿದೆ.

ಕಾಂಗ್‌ಪೋಕ್ಪಿಯಲ್ಲಿ ಮೃತಪಟ್ಟ ನಾಗರಿಕನನ್ನು ಥಿಯಮ್ ಕೊಂಜಿನ್ ನಿವಾಸಿ ತಖೆಲ್ಲಂಬಮ್ ಮನೋರಂಜನ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಕಾಂಗ್‌ಚುಪ್ ಚಿಂಗ್‌ಖಾಂಗ್ ಬಳಿಯ ಬಂಕರ್ ಹಿಲ್ಸ್‌ ಬಳಿ ಮನೋರಂಜನ್ ಮೃತದೇಹ ಪತ್ತೆಯಾಗಿದ್ದು ಇವರೆಲ್ಲರೂ ಬುಧವಾರ ಮತ್ತು ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Latest Indian news

Popular Stories