Featured StoryNational

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ; ವ್ಯಾಪಕ ಆಕ್ರೋಶದ ನಂತರ ಯೂಟರ್ನ್ – ಅವರ ಇಂದಿನ ಮಾತು ಕೇಳಿ!

ಪ್ರಧಾನಿ ಮೋದಿ ಭಾಷಣ ವಿವಾದವಾಗುತ್ತಿದ್ದಂತೆಯೇ ಇಂದು ಯೂ ಟರ್ನ್‌ ಹೊಡೆದಿದ್ದು, ತಮ್ಮ ಇಂದಿನ ಭಾಷಣದಲ್ಲಿ ತ್ರಿವಳಿ ತಲಾಖ್, ಹಜ್ ಕೋಟಾಗಳನ್ನು ಪ್ರಸ್ತಾಪಿಸುತ್ತಾ ‘ಡ್ಯಾಮೇಜ್ ಕಂಟ್ರೋಲ್‌’ಗೆ ಮುಂದಾಗಿದ್ದಾರೆ.

ಮುಸ್ಲಿಮರ ವಿರುದ್ಧದ ದ್ವೇಷ ಭಾಷಣ ಭಾರೀ ಟೀಕೆಗೆ ಗುರಿಯಾಗಿತ್ತು. ಉತ್ತರ ಪ್ರದೇಶದ ಅಲೀಘಡ್‌ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಹಿಂದೆ, ಕಡಿಮೆ ಹಜ್ ಕೋಟಾದ ಕಾರಣ, ಸಾಕಷ್ಟು ಹೊಡೆದಾಟಗಳು ನಡೆಯುತ್ತಿದ್ದವು. ಲಂಚವು ಅಲ್ಲಿ ಸಾಮಾನ್ಯವಾಗಿತ್ತು ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಹಜ್‌ಗೆ ಹೋಗಲು ಅವಕಾಶವಿತ್ತು. ಆದರೆ, ಇಂದು ಭಾರತದಲ್ಲಿನ ಹಜ್ ಕೋಟಾವನ್ನು ಹೆಚ್ಚಿಸುವಂತೆ ನಾನು ಸೌದಿ ಅರೇಬಿಯಾದ ಯುವರಾಜನಿಗೆ ಮನವಿ ಮಾಡಿದ್ದೆ. ಅಲ್ಲದೇ, ವೀಸಾ ನಿಯಮಗಳನ್ನು ಕೂಡ ನಮ್ಮ ಸರ್ಕಾರವು ಮುಸ್ಲಿಮರಿಗೆ ಸುಲಭಗೊಳಿಸಿದೆ” ಎಂದು ಹೇಳಿದ್ದಾರೆ.

“ಈ ಹಿಂದೆ ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಹಜ್‌ಗೆ ಏಕಾಂಗಿಯಾಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಮುಹ್ರಿಮ್(ಮೇಲುಸ್ತುವಾರಿ) ಇಲ್ಲದೆ ಹಜ್‌ಗೆ ಹೋಗಲು ಆಗುತ್ತಿರಲಿಲ್ಲ. ಈಗ ನಮ್ಮ ಸರ್ಕಾರವು ಮುಹ್ರಿಮ್ ಇಲ್ಲದೆಯೂ ಹಜ್‌ಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಹಲವು ಮುಸ್ಲಿಂ ತಾಯಂದಿರ ಹಜ್‌ಗೆ ತೆರಳುವ ಕನಸು ಈಡೇರಿದೆ” ಎಂದು ಮೋದಿ ತಮ್ಮ ಭಾಷಣದಲ್ಲಿ ನುಡಿದಿದ್ದಾರೆ.

“ಕಾಂಗ್ರೆಸ್ ಮತ್ತು ಎಸ್‌ಪಿಯಂತಹ ಪಕ್ಷಗಳು ಯಾವಾಗಲೂ ತುಷ್ಟೀಕರಣದ ರಾಜಕಾರಣ ಮಾಡುತ್ತಿವೆ. ಮುಸ್ಲಿಮರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ಎಂದಿಗೂ ಏನನ್ನೂ ಮಾಡಿಲ್ಲ. ತ್ರಿವಳಿ ತಲಾಖ್‌ಗೆ ಬಲಿಯಾದ ಅನೇಕ ಹೆಣ್ಣುಮಕ್ಕಳ ಜೀವನವು ನಾಶವಾಯಿತು. ತ್ರಿವಳಿ ತಲಾಖ್‌ನಿಂದಾಗಿ ಮಗಳು, ಅವಳ ತಂದೆ, ಸಹೋದರ ಮತ್ತು ಕುಟುಂಬ ಎಲ್ಲರೂ ತೊಂದರೆಗೀಡಾಗುತ್ತಿದ್ದರು. ನಾನು ದೇಶದಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿ ಮಾಡುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳ ಜೀವನವನ್ನು ಭದ್ರಪಡಿಸಿದ್ದೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button