ದೇಶದ ಶಾಂತಿ ನೆಮ್ಮದಿ ಕಾಪಾಡಬೇಕಾದ ಒಬ್ಬ ಪ್ರಧಾನಿ, ಜನಾಂಗದ ಮೇಲೆ ದ್ವೇಷ ಹರಡುತ್ತಿದ್ದಾರೆ – ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ

ಉಡುಪಿ, ಎ.22: ಭಾರತದಲ್ಲಿ 20ಕೋಟಿ ಜನಸಂಖ್ಯೆ ಇರುವ ಮುಸ್ಲಿಮ್ ಜನಾಂಗದ ವಿರುದ್ಧ ದೇಶದ ಪ್ರಧಾನಿ ನರೇಂದ್ರ ಮೋದಿ ಧ್ವೇಷದ ಜ್ವಾಲೆಯನ್ನೇ ಹರಿದು ಬಿಟ್ಟಿದ್ದಾರೆ. ದೇಶದ ಶಾಂತಿ ನೆಮ್ಮದಿ ಕಾಪಾಡಬೇಕಾದ ಒಬ್ಬ ಪ್ರಧಾನಿ, ಜನಾಂಗದ ಮೇಲೆ ಧ್ವೇಷ ಹರುಡವ ಕೆಲಸ ಮಾಡುತ್ತಿರುವುದು ಅಪಾಯಕಾರಿ. ಸರ್ವಾಧಿಕಾರ ಆಡಳಿತದಲ್ಲಿ ಮಾತ್ರ ಇಂತಹ ಹೇಳಿಕೆ ಬರಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಕಿಡಿಕಾರಿದರು.

ಉಡುಪಿ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಜನಾಂಗೀಯ ದ್ವೇಷದಿಂದ ಆ ವ್ಯಕ್ತಿಗಳು ಹಾಗೂ ಇಡೀ ದೇಶವೇ ನಾಶವಾಗುತ್ತದೆ. ನರೇಂದ್ರ ಮೋದಿಯ ಈ ನಡೆ ದೇಶಕ್ಕೆ ಒಳ್ಳೆಯದಲ್ಲ. 2014ರಲ್ಲಿ ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಆರೋಪ ಮಾಡಿ, 2019ರಲ್ಲಿ ದೇಶಭಕ್ತಿ ಭಾವನೆ ಪ್ರಚೋದಿಸಿ ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಇವರು ಅಧಿಕಾರಕ್ಕೆ ಬಂದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅದು ಯಾವುದು ನಡೆಯುವುದಿಲ್ಲ. ಅದಕ್ಕಾಗಿ ಹತಾಶ ಭಾವನೆಯಿಂದ ಬಾಯಿಬಂದ ಹೇಳಿಕೆಗಳನ್ನು ಮೋದಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದ ಜನತೆಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಹತಾಶ ಭಾವನೆ ಮೂಡುತ್ತಿದೆ. ಇದರ ಪರಿಣಾಮ ನಾಗಲ್ಯಾಂಡ್ನಲ್ಲಿ ನಾಲ್ಕು ಲಕ್ಷ ಮಂದಿ ಚುನಾವಣಾ ಬಹಿಷ್ಕಾರ ಮಾಡಿದರು. ಜನತೆಯ ಹೃದಯದಲ್ಲಿ ಒಂದು ರೀತಿಯ ಲಾವ ರಸದ ಒಳ ಹರಿಯುತ್ತಿದೆ. ಆ ಲಾವ ರಸದ ಒಳ ಹರಿವು ಈ ಬಾರಿಯ ಚುನಾವಣೆಯಾಗಿ ಜ್ವಾಲಮುಖಿಯಾಗಿ ಸ್ಪೋಟ ಆಗಲಿದೆ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆ ನಡೆಸಲು 60 ದಿನಗಳನ್ನು ತೆಗೆದು ಕೊಂಡ ಇವರು, ಇನ್ನು ಒಂದು ದೇಶ ಒಂದು ಚುನಾವಣೆ ಮಾಡಲು ಒಂದು ವರ್ಷವೇ ಬೇಕಾದೀತು. ಈ ಎಲ್ಲ ಗೊಂದಲಗಳಿಂದ ಕೂಡಿರುವ ಈ ಕಲ್ಪನೆ ಅನುಷ್ಠಾನಗೊಳಿಸುವುದು ಅಷ್ಟು ಸುಲಭ ಅಲ್ಲ. ಅದಕ್ಕಾಗಿ ಸಂವಿಧಾನ ತಿದ್ದುಪಡಿ ಮತ್ತು ಸಾಕಷ್ಟು ಆಡಳಿತದಲ್ಲಿ ಸುಧಾರಣೆ ಆಗಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಇಂದು ಪ್ರಜಾಪ್ರಭುತ್ವದ ಧ್ವನಿ ಕ್ಷೀಣ ಆಗುತ್ತಿದೆ. ಈ ದೇಶಕ್ಕೆ ದಕ್ಷತೆಯಿಂದ ಕೆಲಸ ಮಾಡುವ ಉತ್ತಮ ಆಡಳಿತಗಾರ ಬೇಕೆ ಹೊರತು ಕಮಿಂಟಿಯೇಟರ್ ಅಲ್ಲ. ಮೋದಿ ಈಗ ಎನ್ಡಿಎ, ಬಿಜೆಪಿ ಬಿಟ್ಟು ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಈ ಬಗ್ಗೆ ಈಗಾಗಲೇ ಜನ ಎಚ್ಚೆತ್ತು ಕೊಂಡಿದ್ದಾರೆ. ಇವರು 400 ಅಲ್ಲ 150ಕ್ಕಿಂತ ಹೆಚ್ಚು ಸ್ಥಾನ ಪಡೆಯುವುದಿಲ್ಲ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ನಟ ಶಿವರಾಜ್ ಕುಮಾರ್, ಮುಖಂಡರಾದ ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಅಶೋಕ್ ಕುಮಾರ್ ಕೊಡವೂರು, ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಡಿ.ಆರ್.ರಾಜು, ಭಾಸ್ಕ ರಾವ್ ಕಿದಿಯೂರು, ನವೀನ್ ಶೆಟ್ಟಿ ಉಪಸ್ಥಿತರಿದ್ದರು.

Latest Indian news

Popular Stories