
ಚಿತ್ರದುರ್ಗದ ಮುರುಘಾಶ್ರೀಗೆ ಜಾಮೀನು
ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೋ ಪ್ರಕರಣದಲ್ಲಿಆರೋಪಿಯಾಗಿರುವ ಸಂಬಂಧ ಜೈಲು ಸೇರಿದ್ದ ಎ1 ಆರೋಪಿ ಚಿತ್ರದುರ್ಗದ ಮುರುಘಾಶ್ರೀಗೆ ಜಾಮೀನು ದೊರಕಿದ್ದು, ಇಂದು(ನ.16) ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ.
ಮಠದ ಹಾಸ್ಟೆಲ್ನಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿ, ಪೋಕ್ಸೋ ಕೇಸು ದಾಖಲಾಗಿ ಕಳೆದ ವರ್ಷ ಮುರುಘಾ ಶರಣರು ಜೈಲು ಸೇರಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ನವೆಂಬರ್ 8ರಂದು ಜಾಮೀನು ನೀಡಿತ್ತು. ಹೀಗಾಗಿ ಇಂದು (ನವೆಂಬರ್ 16) ಮುರುಘಾಶ್ರೀ ಬರೋಬ್ಬರಿ 14 ತಿಂಗಳು ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮೊದಲ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀಗೆ ಜಾಮೀನು ಪಡೆದ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನು ಆದೇಶದ ಪ್ರತಿಯನ್ನು ಚಿತ್ರದುರ್ಗ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿತ್ತು. ಜಾಮೀನು ನೀಡುವ ವೇಳೆ ಹೈಕೋರ್ಟ್, ಏಳು ಷರತ್ತು ವಿಧಿಸಿ, ಮಂಜೂರು ಮಾಡಿತ್ತು.
ಹಾಸ್ಟೆಲ್ನ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶ್ರೀಗಳ ವಿರುದ್ಧ 2022ರ ಆಗಸ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು. 2022ರ ಸೆಪ್ಟಂಬರ್ 1ರಂದು ಬಂಧನ ಮಾಡಲಾಗಿತ್ತು. ಶ್ರೀಗಳ ವಿರುದ್ಧ ಎರಡು ಪ್ರಕರಣ ದಾಖಲಾಗಿದ್ದು, ಮೊದಲ ಪ್ರಕರಣದಲ್ಲಿ ಮಾತ್ರ ಅವರಿಗೆ ಜಾಮೀನು ದೊರಕಿದೆ.




