ಭಾರತದಲ್ಲಿ ಮುಸ್ಲಿಮ್ ಜನಸಂಖ್ಯೆ ಹೆಚ್ಚಳ ಎಂಬುವುದು ಎಷ್ಟು ಸರಿ – ಒಂದು ವಿಶ್ಲೇಷಣೆ!

ಭಾರತ ದೇಶದಲ್ಲಿ ಮುಸ್ಲಿಮ್‌ ಸಮುದಾಯವನ್ನು ಗುರಿಯನ್ನಾಗಿಸಿ ಜನಸಂಖ್ಯಾ ನಿಯಂತ್ರಣ ಕಾನೂನಿನ ಕುರಿತು ಚರ್ಚೆಗಳು ನಡೆಯುತ್ತಿದೆ. ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮ್‌ ಸಮುದಾಯದ ಜನಸಂಖ್ಯೆ ಏರಿಕೆ ಕಾಣುತ್ತಿದೆಯೇ ಅಥವಾ ಇದೊಂದು ರಾಜಕೀಯ ಕಪೋಕಲ್ಪಿತ ಪಿತೂರಿಯೇ ಎಂಬ ಕುರಿತು ಅತೀ ಸೂಕ್ಷ್ಮವಾಗಿ ಅರಿಯಬೇಕಾಗಿರುವುದು ಅನಿವಾರ್ಯ.

ಭಾರತ ದೇಶ ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರ. ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಕೂಡ. ಈ ದೇಶದಲ್ಲಿ ಮುಸ್ಲಿಮರು ಅಲ್ಪ ಸಂಖ್ಯಾತರಾಗಿರುವ ಹೊರತಾಗಿಯೂ ಅವರ ಮೇಲೆ ಜನಸಂಖ್ಯಾ ಹೆಚ್ಚಳದಲ್ಲಿ ಪ್ರಮುಖ ಪಾತ್ರಧಾರಿಯನ್ನಾಗಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಈ ದೇಶದ ಜನಸಂಖ್ಯಾ ದತ್ತಾಂಶಗಳನ್ನು ಅವಲೋಕಿಸಿದ್ದಾಗ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂಬ ವಿಚಾರಗಳು ಕೂಡ ಬೆಳಕಿಗೆ ಬರುತ್ತದೆ. ಪ್ರತಿ ಬಾರಿ ಮುಸ್ಲಿಮ್‌ ಸಮುದಾಯವನ್ನು ಗುರಿಯಾಗಿಸುವಾಗ ಸತ್ಯ ವಿಚಾರಗಳನ್ನು ಮರೆ ಮಾಚಿ ದ್ವೇಷದ ವಾತವರಣ ಸೃಷ್ಟಿಸಿ ತಮ್ಮ ವಾದವನ್ನು ನಂಬಿಸುವ ಪ್ರಯತ್ನಗಳು ಯಥೇಚ್ಚಾವಾಗಿ ನಡೆಯುತ್ತದೆ.. ಈ ಕುರಿತು ಸಂಶೋಧನಾ ಪ್ರಬಂಧವೊಂದರಲ್ಲಿ, “ ಮುಸ್ಲಿಮರ ಕುರಿತ ಚರ್ಚೆಯ ಒಂದು ನಿರ್ಣಾಯಕ ಅಂಶವೆಂದರೆ ಚರ್ಚೆಯ ತೀವ್ರತೆ ಮತ್ತು ಪ್ರಾಯೋಗಿಕ ಸಂಗತಿಗಳ ಕೊರತೆಯ ನಡುವಿನ ವಿಲೋಮ ಸಂಬಂಧ. {ವ್ಯಾಲೆಂಟಾ (2012) (ಪು 35).} ಎಂದು ವ್ಯಾಖ್ಯಾನಿಸಲಾಗುತ್ತದೆ.

ನೊಬೇಲ್‌ ವಿಜೇತ ವಿಜ್ಙಾನಿ ಅಮೃತ್‌ ಸೇನ್ ತನ್ನ ಖ್ಯಾತ ಪುಸ್ತಕ‌ “Identity and Violence” (ಐಡೆಂಟಿ ಎಂಡ್‌ ವೈಲೆನ್ಸ್) ಪುಸ್ತಕದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ, ʼಭಾರತದಲ್ಲಿ ಅವರು vs ನಾವು ಎಂಬ ಚರ್ಚೆಯನ್ನು ಹುಟ್ಟಿಸಲು ನಿರಂತರವಾಗಿ ಧಾರ್ಮಿಕ ಗುರುತನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತದೆಂದು ಉಲ್ಲೇಖಿಸುತ್ತಾರೆ. ಈ ವಾದ ಭಾರತದ ಮಟ್ಟಿಗೆ ನಿಜವೂ ಕೂಡ ಇಲ್ಲಿ ಸುಳ್ಳನ್ನು ಸತ್ಯವಾಗಿಸಲು ಮೊದಲು ಧಾರ್ಮಿಕತೆಯನ್ನು ಗುರಿಯಾಗಿಸಲಾಗುತ್ತದೆ ನಂತರ ತಮ್ಮ ಪಿತೂರಿಯ ವಿಚಾರಗಳನ್ನು ಬಹಳ ಅಚ್ಚುಕಟ್ಟಾಗಿ ಮಂಡಿಸಿ ನಂಬಿಸಲಾಗುತ್ತದೆ. ಈ ದೇಶದ ಜನಸಂಖ್ಯಾ ಹೆಚ್ಚಳಕ್ಕೆ ಮುಸ್ಲಿಮರು ಕಾರಣರೆಂದು ಬಿಂಬಿಸುವ ಪ್ರಯತ್ನ ಇದು ಈಗಿನದ್ದಲ್ಲ. 1909 ರಲ್ಲಿ ಯು.ಎನ್‌ ಮುಖರ್ಜಿ ಬರೆದ “Hindus: A Dying Race” ಪುಸ್ತಕದಲ್ಲೂ ಮುಸ್ಲಿಮರನ್ನು ಗುರಿಯಾಗಿಸುವ ಪ್ರಯತ್ನ ನಡೆಸಲಾಗಿತ್ತು. ನಂತರ “Muslims outnumbering Hindus” ಬರೆಯಲಾಯಿತು. ಹೀಗೆ ನಿರಂತರವಾಗಿ ಮುಸ್ಲಿಮರು ಹಿಂದು ಸಮುದಾಯಕ್ಕೆ ಅಪಾಯವೊಡ್ಡುತ್ತಾರೆ. ಮುಸ್ಲಿಮರು ಜನಸಂಖ್ಯೆಯ ಸ್ಪೋಟಕರು ಎಂದು ನಿರೂಪಣೆಯೊಂದನ್ನು ವ್ಯವಸ್ಥಿತವಾಗಿ ಕಟ್ಟಿ ಬೆಳೆಸಲಾಗುತ್ತಿದೆ.

ಭಾರತದ ಜನಸಂಖ್ಯೆ ಹೆಚ್ಚಳದಲ್ಲಿ ಮುಸ್ಲಿಮರ ಪಾತ್ರ ನಿರೂಪಿಸಲು ದೇಶದಲ್ಲಿ ಪ್ರಮುಖವಾದ ಮೂರು ಕಟ್ಟುಕಥೆಗಳನ್ನು ಹೆಣೆಯಲಾಗಿದೆ. ಈ ಜನಸಂಖ್ಯಾ ಹೆಚ್ಚಳದ ಪ್ರೊಪೊಗಂಡಾದ ಕುರಿತು ಅರಿಯುವ ಮುನ್ನ ಈ ಮೂರು ಸುಳ್ಳಾರೋಪಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯ.

1. ಹಿಂದೂಗಳಿಗಿಂತ ಹೆಚ್ಚು ವೇಗವಾಗಿ ಸಂತಾನೋತ್ಪತ್ತಿ ಮಾಡುವ ಮೂಲಕ ಮುಸ್ಲಿಮರು ತಮ್ಮ ದೇಶದಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವ ಮಹತ್ತರವಾದ ಯೋಜನೆಯನ್ನು ಹೊಂದಿದ್ದಾರೆ.
2. ಜನಸಖ್ಯೆಯನ್ನು ಹೆಚ್ಚಿಸುವ ಕಾರಣಕ್ಕಾಗಿ ಅವರು ಬಹುಪತ್ನಿತ್ವವನ್ನು ಅಳವಡಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಮುಸ್ಲಿಮರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರಿದ್ದಾರೆ ಎಂಬ ವಾದ.
3. ಸಂತಾನೋತ್ಪತ್ತಿಯ ಪ್ರಗತಿ ಕುಂಠಿತಗೊಳ್ಳಬಾರದೆಂಬ ಕಾರಣಕ್ಕೆ ಅವರು ಕುಟುಂಬ ಯೋಜನೆಗಳ ನಿಯಮಗಳನ್ನು ಅನುಸರಿಸುವುದಿಲ್ಲವೆಂಬ ಆರೋಪ.

ಈ ಮೂರು ಪ್ರಮುಖ ಸುಳ್ಳಾರೋಪಗಳು ಸೇರಿದಂತೆ ಇನ್ನಿತರ ಆರೋಪಗಳನ್ನು ಸೇರಿಸಿ ಆಧಾರ ರಹಿತವಾಗಿ ಮುಸ್ಲಿಮ್‌ ಸಮುದಾಯವನ್ನು ದೂಷಿಸುವ ಪ್ರಯತ್ನವನ್ನು ನಡೆಸಲಾಗುತ್ತದೆ. ಈ ಸುಳ್ಳಾರೋಪಗಳ ಜಾಡನ್ನು ಹಿಡಿದು ಸಾಗುವ ಪ್ರಯತ್ನ ನಾವು ಮಾಡಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಬಹು ಪತ್ನಿತ್ವ ಅತೀ ಹೆಚ್ಚು ರೂಢಿಯಿರುವ ಸಮುದಾಯದ ಕುರಿತಾದ ದತ್ತಾಂಶದ ಮೇಲೆ ಗಮನ ಹರಿಸುವುದು ಅತೀ ಅಗತ್ಯವಾಗಿದೆ.

1971 ರ ಸೆನ್ಸಸ್‌ ಮತ್ತು ಭಾರತದಲ್ಲಿ ಬಹುಪತ್ನಿತ್ವದ ಸರ್ವೇಯ ಆಧಾರದಲ್ಲಿ ಸಮುದಾಯುವಾರು ಬಹುಪತ್ನಿತ್ವದ ದತ್ತಾಂಶ ಈ ರೀತಿಯಿದೆ. ಆದಿವಾಸಿಗಳಲ್ಲಿ 15.25%, ಬೌದ್ದರಲ್ಲಿ 7.9%, ಜೈನರಲ್ಲಿ 6.72%, ಹಿಂದುಗಳಲ್ಲಿ 5.80% ಮತ್ತು ಮುಸ್ಲಿಮರಲ್ಲಿ ಎಲ್ಲ ಸಮುದಾಯಕ್ಕಿಂತ ಕಡಿಮೆ ಅಂದರೆ 5.70% ದಷ್ಟಿದೆ. ಇದರ ಹೊರತಾಗಿಯೂ ಮುಸ್ಲಿಮ್‌ ಸಮುದಾಯಬನ್ನು ಗುರಿಯಾಗಿಸಿ ರಾಜಕೀಯ ಲಾಭಕ್ಕಾಗಿ “ಹಮ್‌ ಪಾಂಚ್‌, ಹಮಾರೆ ಪಚ್ಚಿಸ್”‌ ಎಂಬ ಸುಳ್ಳು ಘೋಷಣೆಗಳನ್ನು ಪ್ರಕಟಿಸಿ ಜನರಲ್ಲಿ ಅಪನಂಬಿಕೆಯ ಮತ್ತು ತಪ್ಪು ಮಾಹಿತಿಯನ್ನು ಬಿತ್ತರಿಸುವ ಯತ್ನ ವಿಶ್ವ ಹಿಂದು ಪರಿಷತ್‌ ನಡೆಸಿದೆ.

ಇನ್ನು ಮುಸ್ಲಿಮರು ಅತೀ ಹೆಚ್ಚು ಮಕ್ಕಳನ್ನು ಹುಟ್ಟಿಸಿ ಈ ದೇಶದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಾರೆಂಬ ಆರೋಪ ಕೂಡ ಮಾಡಲಾಗುತ್ತದೆ. ಈ ಆರೋಪ ಕೂಡ ಸುಳ್ಳಾಗಿದ್ದು National Family and Health Survey (NFHS) ಇದರ ಪ್ರಕಾರ 2015-16 ದತ್ತಾಂಶದಲ್ಲಿ ಮುಸ್ಲಿಮರ ಫಲವತ್ತತೆಯ ಪ್ರಮಾಣ 2.62 ಆದರೆ ಹಿಂದುಗಳದ್ದು 2.13 ಇಲ್ಲಿ ನಿಮಗೆ ಹೆಚ್ಚು ಕಾಣಿಸಿಕೊಂಡರು ವಾಸ್ತವಿಕತೆಯಲ್ಲಿ ಕಳೆದ ದಶಕದ ದತ್ತಾಂಶಗಳ ಮೇಲೆ ಗಮನ ಹರಿಸಿದಾಗ ಮುಸ್ಲಿಮರಲ್ಲಿ 3.40 ಮತ್ತು ಹಿಂದುಗಳಲ್ಲಿ 2.59 ಇತ್ತು ಎಂಬುವುದು ಗಮನಾರ್ಹ. ಇದರರ್ಥ ಮುಸ್ಲಿಮರಲ್ಲಿ ಈ ಅಂಶ 0.81 ಮತ್ತ ಹಿಂದುಗಳಲ್ಲಿ 0.49 ನಷ್ಟು ಇಳಿಕೆ ಕಂಡಿದೆ. ಈ ದತ್ತಾಂಶಗಳ ಆಧಾರದಲ್ಲಿ ಹೇಳುವುದಾದರೆ ದೇಶದಲ್ಲಿನ ಜನಸಂಖ್ಯೆಯು ಸಮುದಾಯವಾರು ಕೂಡ ಇಳಿಕೆ ಕಾಣುತ್ತಿದೆ ಎಂಬುವುದು ಮುಖ್ಯ. ಆದರೆ ಮುಸ್ಲಿಮರಲ್ಲಿ ಈ TFR ಪ್ರಮಾಣ ಭಾರಿ ಇಳಿಕೆ ಕಂಡಿದೆ ಎಂಬುವುದು ಸುಳ್ಳಾರೋಪಗಳಿಗೆ ಆಧಾರ ಸಹಿತ ಉತ್ತರವಾಗಿದೆ. ಇನ್ನು ಮುಸ್ಲಿಮರು ಹೆಚ್ಚು ಜನಸಂಖ್ಯೆ ವೃದ್ದಿ ಮಾಡಿ ಬಡತನಕ್ಕೆ ಕಾರಣವಾಗುತ್ತಿದ್ದಾರೆಂಬುವುದು ಕೂಡ ಸುಳ್ಳು NFHS ಸರ್ವೆಯ ಆಧಾರದಲ್ಲಿ ಕೇರಳ ಮತ್ತು ತಮಿಳುನಾಡಿನ ಮುಸ್ಲಿಮರ ಮಕ್ಕಳ ಹುಟ್ಟುವಿಕೆಯ ದರ ಕ್ರಮವಾಗಿ 1.8 ಮತ್ತು 1.7 TFR ಇದೆ. ಅದರಲ್ಲೂ ಅಲ್ಲಿನ ಮುಸ್ಲಿಮರು ಅರ್ಥಿಕವಾಗಿ ಸಬಲರೂ ಕೂಡ ಇದ್ದಾರೆ. ಅದೇ ಉತ್ತರ ಪ್ರದೇಶದಲ್ಲಿ ಹಿಂದು ಸಮುದಾಯದ TFR ಪ್ರಮಾಣ 2.6 ರಷ್ಟಿದೆ.

ಇನ್ನು ಮುಸ್ಲಿಮರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಇವರು ಮುದೊಂದು ದಿನ ಹಿಂದುಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಾರೆಂಬ ವಾದದಲ್ಲೂ ಹುರುಳಿಲ್ಲ ಎಂಬುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅರ್ಥವಾಗುತ್ತದೆ. ಶೇ 84 ರಷ್ಟು ಇದ್ದ ಹಿಂದುಗಳು ಶೇ 79.84 ಇಳಿದಿರುವುದು ನಿಜ. ಮುಸ್ಲಿಮರು ಶೇ 9.8 ರಿಂದ ಶೇ 14 ಏರಿಕೆ ಕಂಡಿದ್ದಾರೆ. ಆದರೆ ಈ ಏರಿಕೆಯು ನಗಣ್ಯ ಈ ಏರಿಕೆ ಸುಮಾರು 60 ವರ್ಷಗಳ ನಂತರ ಕಂಡು ಬಂದಿರುವಂತಹದ್ದು ಇದೇ ವೇಗದಲ್ಲಿ ಮುಂದುವರಿದರೆ 2100 ರಷ್ಟರ ಹೊತ್ತಿಗೂ ಹಿಂದುಗಳಿಗಿಂತ ಹೆಚ್ಚಾಗಲೂ ಸಾಧ್ಯವೇ ಇಲ್ಲ. ಇದರ ಕುರಿತು ದತ್ತಾಂಶ ತಜ್ಙರಾದ ದೆಹಲಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ದಿನೇಶ್‌ ಸಿಂಗ್‌ ಈ ದತ್ತಾಂಶಗಳನ್ನು ಅಧ್ಯಯನ ಮಾಡಿ ಮುಸ್ಲಿಮರು ಹಿಂದುಗಳನ್ನು ಜನಸಂಖ್ಯೆಯಲ್ಲಿ ಹಿಂದಿಕ್ಕಲು ಸಾಧ್ಯವೇ ಇಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಬಲಪಂಥಿಯ ಸಂಘಟನೆಗಳ ಆರೋಪದಂತೆ ಮುಸ್ಲಿಮರು ಕುಟುಂಬ ಯೋಜನೆಗಳನ್ನು ಅನುಸರಿಸುತ್ತಿಲ್ಲವೆಂಬುವುದು ಶುದ್ದ ಸುಳ್ಳು. ಈಗಿನ ಅಧ್ಯಯನದ ಪ್ರಕಾರ ಹಿಂದುಗಳನ್ನು ತಾಳೆ ಹಾಕಿದರೆ ಮುಸ್ಲಿಮರು ಕುಟುಂಬ ಯೋಜನೆಗಳನ್ನು ಅತೀ ವೇಗವಾಗಿ ಮತ್ತು ಹೆಚ್ಚಾಗಿ ಅನುಸರಿಸುತ್ತಿದ್ದಾರೆಂಬ ಅಂಶ ಬೆಳಕಿಗೆ ಬಂದಿದೆ.
ಈ ಮೇಲಿನ ದತ್ತಾಂಶ ಮತ್ತು ವಾಸ್ತವಿಕ ಅಂಶಗಳ ಆಧಾರದ ಮೇಲೆ ನೋಡುವುದಾದರೆ ಮುಸ್ಲಿಮರು ಈ ದೇಶದ ಜನಸಂಖ್ಯೆ ಬೆಳವಣಿಗೆಯಲ್ಲಿ ಬೇರೆ ಸಮುದಾಯದವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆಂಬುವುದು ಒಂದು ರಾಜಕೀಯ ಷಡ್ಯಂತ್ರದ ಹೊರತು ಮತ್ತೇನಲ್ಲ. ನನ್ನ ಪ್ರಕಾರ ಬಲಪಂಥೀಯ ಸಂಘಟನೆಗಳು ಮತ್ತು ಅದರ ರಾಜಕೀಯ ಪಕ್ಷ ಬಿಜೆಪಿ ತರಲು ಹೊರಟಿರುವ ಜನಸಂಖ್ಯಾ ನಿಯಂತ್ರಣ ಕಾಯಿದೆಯು ಅದು ಮುಸ್ಲಿಮರು ಸೇರಿದಂತೆ ಇತರ ಸಮುದಾಯದವರ ಮೇಲೆ ಗಂಭೀರ ಪರಿಣಾಮ ಖಂಡಿತ ಬೀರಲಿದೆ.

ಜುಲೈ 12,2019 ರಂದು ಸಂಸದ ರಾಕೇಶ್‌ ಸಿನ್ಹಾ ರಾಜ್ಯಸಭೆಯಲ್ಲಿ ಜನಸಂಖ್ಯಾ ನಿಯಂತ್ರಣಾ ಕರಡು ಮಸೂದೆಯನ್ನು ಮಂಡಿಸುತ್ತಾರೆ. ಈ ಮಸೂದೆಯ ಪ್ರಕಾರ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ವಿವಿಧ ಸೌಲತ್ತನ್ನು ಉಲ್ಲೇಖಿಸುತ್ತದೆ. ಅದರೊಂದಿಗೆ ಎರಡಕ್ಕಿಂತ ಹೆಚ್ಚಿನ ಮಕ್ಕಳು ಹೊಂದಿರುವ ಕುಟುಂಬಕ್ಕೆ ಚುನಾವಣೆ ನಿಲ್ಲಲು ಅವಕಾಶ ನಿರಾಕರಣೆ ಸೇರಿದಂತೆ ಸಾಲಗಳ ಮೇಲೆ ಅಧಿಕ ಬಡ್ಡಿ. ಉಳಿತಾಯ ಖಾತೆಗೆ ಕಡಿಮೆ ಬಡ್ಡಿ ಹೀಗೆ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ.
ವಾಸ್ತವದಲ್ಲಿ ಈ ಮಸೂದೆ ಅನುಷ್ಠಾನಕ್ಕೆ ಬಂದರೆ ಈ ಮೇಲಿನ ದತ್ತಾಂಶಗಳನ್ನು ಗಮನಿಸಿದಾಗ ಈ ದೇಶದ ದೊಡ್ಡ ಜನಸಂಖ್ಯೆ ಅಸಮಾನತೆಯನ್ನು ಎದರಿಸಲಿದೆ ಮುಖ್ಯವಾಗಿ ಆದಿವಾಸಿಗಳು, ದಲಿತರು, ಬುಡಕಟ್ಟು ಜನಾಂಗಗಳು, ಮುಸ್ಲಿಮರು ಸೇರಿದಂತೆ ಹಿಂದುಗಳಲ್ಲಿನ ಹಲವು ವರ್ಗಗಳು ಈ ಕಾಯಿದೆಯ ವ್ಯತಿರಿಕ್ತ ಪರಿಣಾಮ ಎದುರಿಸಲಿದೆ. ವಾಸ್ತವದಲ್ಲಿ ಸಂಘಪರಿವಾರ ಮುಸ್ಲಿಮರನ್ನುವಿಲನ್‌ ಗಳಾಗಿ ನಿರೂಪಿಸಿ ಕಾಯಿದೆ ತರಲು ಹೊರಟಿದ್ದು ಈ ಮೇಲಿನ ದತ್ತಾಂಶಗಳ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಈ ಕಾಯಿದೆಯಿಂದ ಮುಸ್ಲಿಮರಿಗಿಂತ ಇತರ ಸಮುದಾಯಗಳಿಗೆ ಭಾರೀ ಹೊಡೆತ ಬೀಳುವುದು ಸುಳ್ಳಲ್ಲ. ಇನ್ನು ಹಲವು ಸಮುದಾಯಗಳ ಸಂವಿಧಾನಿಕ ಹಕ್ಕುಗಳ ಮೇಲೂ ಪ್ರಹಾರ ನಡೆಸುತ್ತದೆ. ಅರ್ಥಿಕ, ಸಾಮಾಜಿಕ,ರಾಜಕೀಯ ಅಸಮಾನತೆಗಳು ತಲೆದೋರಲಿವೆ. ಅದಕ್ಕಿಂತ ಮುಖ್ಯವಾಗಿ ಈ ದೇಶದಲ್ಲಿ TFR ಮತ್ತು ಜನನ ಪ್ರಮಾಣ ಹೆಚ್ಚಾಗುತ್ತಿದೆ ಎಂಬುವುದು ದತ್ತಾಂಶಗಳ ಪ್ರಕಾರ ಮಿಥ್ಯವಾಗಿದೆ. ನಿಧಾನಗತಿಯಲ್ಲಿ ಕ್ಷೀಣಿಸುತ್ತಲೂ ಇದೆ. ಒಂದು ವೇಳೆ ಜನಸಂಖ್ಯೆ ನಿಯಂತ್ರಣ ಕಾನೂನನ್ನು ಅವೈಜ್ಙಾನಿಕವಾಗಿ ಜಾರಿ ಮಾಡಿದ್ದೆ ಆದರೆ ‌ಬಿಜೆಪಿಗೆ ಲಾಭವಾಗಬಹುದು ಆದರೆ ದೇಶದ ಮೇಲೆ ಭಾರೀ ಪರಿಣಾಮ ಬೀರಿ, ಈ ದೇಶದ ಉತ್ಪಾದಕ ಜನಸಂಖ್ಯಾ ಪ್ರಮಾಣ ಕ್ಷೀಣಿಸಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಲಿದೆ ಎಂಬುವುದಂತು ಸತ್ಯ!

ನಿರೂಪಣೆ – ಯಾಸೀನ್‌ ಕೋಡಿಬೆಂಗ್ರೆ (ಎಲ್.ಎಲ್.ಬಿ, ರಾಜಕೀಯ ಶಾಸ್ತ್ರ, ಸ್ನಾತ್ತಕೋತರ ವಿದ್ಯಾರ್ಥಿ)

Latest Indian news

Popular Stories