Onion price hike | ಈರುಳ್ಳಿ ಬೆಲೆಯಲ್ಲಿ ದಿಢೀರ್‌ ಏರಿಕೆ, ಕ್ವಿಂಟಾಲ್‌ ಗೆ ಶೇ.40ರಷ್ಟು ಹೆಚ್ಚಳ

ನವದೆಹಲಿ: ಬೆಳ್ಳುಳ್ಳಿ ದರ ಏರಿಕೆಯಾಗಿದ್ದ ಬೆನ್ನಲ್ಲೇ ಇದೀಗ ಈರುಳ್ಳಿ ಬೆಲೆಯು ದಿಢೀರನೆ ಹೆಚ್ಚಳವಾಗುವ ಮೂಲಕ ಜನಸಾಮಾನ್ಯರ ಜೇಬಿಗೆ ಇನ್ನಷ್ಟು ಹೊರೆ ಬಿದ್ದಂತಾಗಿದೆ. ಈರುಳ್ಳಿ ಬೆಲೆ ಏರಿಕೆಯಿಂದ ಅಡುಗೆ ಮನೆ ಹಾಗೂ ರೆಸ್ಟೋರೆಂಟ್‌ ಗಳಲ್ಲಿಯೂ ಬಿಸಿ ಮುಟ್ಟುವಂತಾಗಿದೆ.

ಈರುಳ್ಳಿ ರಫ್ತು ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ. ದೇಶದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಾಸಲ್‌ ಗಾಂವ್‌ ಕೃಷಿ ಉತ್ಪಾದನಾ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ಈರುಳ್ಳಿ ರಖಂ ಮಾರಾಟ ಬೆಲೆ ಶೇ.40ರಷ್ಟು ಏರಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.

ಈರುಳ್ಳಿ ಪ್ರತಿ ಕ್ವಿಂಟಾಲ್‌ ಬೆಲೆ 1,280 ರೂಪಾಯಿಯಿಂದ 1,800 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಕನಿಷ್ಠ ಬೆಲೆಯ 1,000 ಹಾಗೂ ಗರಿಷ್ಠ ಬೆಲೆ ಕ್ವಿಂಟಾಲ್‌ ಗೆ 2,100 ರೂಪಾಯಿಗೆ ಹೆಚ್ಚಳವಾಗಿರುವುದಾಗಿ ವರದಿ ವಿವರಿಸಿದೆ.

ಈರುಳ್ಳಿ ಬೆಳೆ ಲಭ್ಯತೆ ಕುರಿತು ನಿಗಾ ಇರಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದ್ದು, ಅದೇ ರೀತಿ ಗ್ರಾಹಕರು ಮತ್ತು ರೈತರಿಗೆ ಹೆಚ್ಚಿನ ಲಾಭ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಬೆಳ್ಳುಳ್ಳಿ ಬೆಲೆ ಒಂದು ಕೆಜಿಗೆ 550 ರೂಪಾಯಿಗೆ ಏರಿಕೆಯಾಗಿತ್ತು. ರಖಂ ದೇಶದ ಹಲವು ನಗರಗಳಲ್ಲಿ ಬೆಳ್ಳುಳ್ಳಿ ಚಿಲ್ಲರೆ ಮಾರಾಟ ಬೆಲೆ ಕೆಜಿಗೆ 400 ರೂಪಾಯಿಗೆ ಹೆಚ್ಚಳವಾಗಿತ್ತು ಎಂದು ವರದಿ ವಿವರಿಸಿದೆ.

Latest Indian news

Popular Stories