ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಅವರೊಂದಿಗಿನ ಸೈದ್ದಾಂತಿಕ ಭಿನ್ನಾಭಿಪ್ರಾಯದ ಕಾರಣದಿಂದ ಸ್ವಾಮಿ ಪ್ರಸಾದ್ ಮೌರ್ಯ ಅವರು ಪಕ್ಷ ತೊರೆದಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಇದೀಗ ಮೌರ್ಯ ಅವರು ಪಕ್ಷದಿಂದಲೇ ಹೊರನಡೆದಿದ್ದಾರೆ.
ಅವರು ತಮ್ಮ ರಾಜೀನಾಮೆ ಪತ್ರವನ್ನು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜೀನಾಮೆ ನೀಡಿದ ನಂತರ ಸುದ್ದಿ ಸಂಸ್ಥೆ ಪಿಟಿಐಗೆ ಮಾತನಾಡಿದ ಅವರು, ಪಕ್ಷ ತೊರೆಯಲು ಕಾರಣ ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಕ್ಷದೊಂದಿಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಎಂದಿದ್ದಾರೆ.
“ನನಗೆ ಸ್ವಚ್ಛ ರಾಜಕಾರಣದಲ್ಲಿ ನಂಬಿಕೆ ಇದೆ. ನಾನು ಅಖಿಲೇಶ್ ಯಾದವ್ ಅವರನ್ನು ನೋಡಿದ್ದೇನೆ. ಅವರು ಸಮಾಜವಾದಿ ಸಿದ್ಧಾಂತಕ್ಕೆ ವಿರುದ್ಧವಾಗಿದ್ದರು. ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಕೆಲಸ ಮಾಡಿದ ಅನುಭವ ನನಗೂ ಇದೆ. ಅವರು ಕಟ್ಟಾ ಸಮಾಜವಾದಿ ನಾಯಕರಾಗಿದ್ದರು. ಅವರ ಪರಂಪರೆಯನ್ನು ಮುನ್ನಡೆಸುತ್ತಿರುವವರಿಗೆ ಅವರ ಸಿದ್ಧಾಂತವನ್ನು ಅನುಸರಿಸಲು ಸಾಧ್ಯವಾಗುತ್ತಿಲ್ಲ. ಇದು ದುರದೃಷ್ಟಕರ”ಎಂದು ಅವರು ಹೇಳಿದರು.