ಪ್ರಜ್ವಲ್ ಬಗ್ಗೆ ಗೊತ್ತಿಲ್ಲ, ಆದ್ರೆ ಯಾರೂ ಧೃತಿಗೆಡಬೇಕಾದ ಅಗತ್ಯ ಇಲ್ಲ: ಹಾಸನ ಜನತೆಗೆ ಎಚ್ ಡಿ ರೇವಣ್ಣ

ಹಾಸನ: ಲೈಂಗಿಕ ದೌರ್ಜನ್ಯ ಮತ್ತು ಮಹಿಳೆ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರು ಬುಧವಾರ ಹಾಸನದ ಜನತೆಯನ್ನುದ್ದೇಶಿಸಿ ಮಾತನಾಡಿ, ನಾನು ಮತ್ತು ನನ್ನ ತಂದೆ ಎಚ್ ಡಿ ದೇವೇಗೌಡರು ಇರುವವರೆಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಇಂದು ಮೊದಲ ಬಾರಿಗೆ ತಮ್ಮ ಕ್ಷೇತ್ರ ಹೊಳೆನರಸೀಪುರಕ್ಕೆ ಆಗಮಿಸಿದ ರೇವಣ್ಣ, ನಿಮ್ಮ ಜೊತೆ ನಾನು, ದೇವೇಗೌಡರು, ಕುಮಾರಸ್ವಾಮಿ ಹಾಗೂ ನಮ್ಮ ಕುಟುಂಬ ಇರುತ್ತದೆ. ಯಾರೂ ಭಯಪಡುವ, ಧೃತಿಗೆಡಬೇಕಾದ ಅಗತ್ಯವಿಲ್ಲ. ಕಾಲವೇ ಉತ್ತರಿಸುತ್ತದೆ. ಅಲ್ಲಿಯವರೆಗೂ ನಾವು ಸುಮ್ಮನಿರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಜನ ಆತಂಕಗೊಂಡಿದ್ದಾರೆ ಎಂಬ ಪ್ರಶ್ನೆಗೆ ಮಾಜಿ ಸಚಿವ ರೇವಣ್ಣ, ತಂದೆ ದೇವೇಗೌಡರು ಹಾಸನ ಜಿಲ್ಲೆಯನ್ನು 60 ವರ್ಷಗಳಿಂದ ರಕ್ಷಿಸಿದ್ದಾರೆ. ಈಗಲೂ ಅದನ್ನು ಮುಂದುವರಿಸಲಿದ್ದಾರೆ. ಯಾರೂ ಭಯಪಡುವ ಅಗತ್ಯವಿಲ್ಲ. ನಮ್ಮಲ್ಲಿ ಶಕ್ತಿ ಇದೆ ಎಂದರು.

ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಜೊತೆಗಿನ ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜರ್ಮನಿಗೆ ತೆರಳಿದ್ದಾರೆ.

ಇಲ್ಲಿನ ನ್ಯಾಯಾಲಯದಿಂದ ಬಂಧನ ವಾರಂಟ್ ಜಾರಿ ಮಾಡಲಾಗಿದ್ದು, ಇಂಟರ್‌ಪೋಲ್‌ನಿಂದ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.

ತಮ್ಮ ಕಿರಿಯ ಸಹೋದರ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರಜ್ವಲ್‌ಗೆ ವಾಪಸ್ ಬರುವಂತೆ ಮಾಡಿದ ಮನವಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜ್ವಲ್ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ಹಾಸನದಲ್ಲಿ ಪಕ್ಷದ ಚುನಾವಣಾ ಭವಿಷ್ಯ ಏನು ಎಂಬುದು ಜನರಿಗೆ ಬಿಟ್ಟ ವಿಚಾರ ಎಂದ ರೇವಣ್ಣ, ಈ ಜಿಲ್ಲೆ ದೇವೇಗೌಡರನ್ನು 60 ವರ್ಷಗಳ ಕಾಲ ಬೆಂಬಲಿಸಿದೆ. ಕಳೆದ 25 ವರ್ಷಗಳಿಂದ ಇಲ್ಲಿ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಈ ಜಿಲ್ಲೆಯ ಜನತೆಗೆ ಋಣಿಯಾಗಿದ್ದೇನೆ. ಇದನ್ನು ಮೀರಿ ನಾನು ಏನನ್ನೂ ಹೇಳುವುದಿಲ್ಲ. ನಾವು ಅಧಿಕಾರದಲ್ಲಿರಲಿ ಇಲ್ಲದಿರಲಿ ಜನರಿಗಾಗಿ ಹೋರಾಟ ಮುಂದುವರಿಸುತ್ತೇವೆ. ನಮ್ಮ ಹೋರಾಟ ಅಧಿಕಾರಕ್ಕಾಗಿ ಅಲ್ಲ. ನಾವು ಈ ಜಿಲ್ಲೆಯ ಅಭಿವೃದ್ಧಿ ಬಯಸುತ್ತೇವೆಯೇ ಹೊರತು ಇನ್ನೇನೂ ಬೇಡ ಎಂದು ಜೆಡಿಎಸ್ ಶಾಸಕ ಹೇಳಿದರು.

Latest Indian news

Popular Stories