ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತರಿಗೆ HDK ಬೆದರಿಕೆ, SITಗೆ ಕಾಂಗ್ರೆಸ್ ದೂರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸಂತ್ರಸ್ತರಿಗೆ ಬೆದರಿಕೆ ಹಾಕುತ್ತಿದ್ದು, ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸಿಐಡಿ ವಿಶೇಷ ತನಿಖಾ ತಂಡಕ್ಕೆ ಗುರುವಾರ ದೂರು ಸಲ್ಲಿಸಿದೆ.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹಲವು ಮಹಿಳೆಯರು ಬಲಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣಗಳ ತನಿಖೆಗೆ ಸರ್ಕಾರ ಎಸ್‌ಐಟಿ ರಚಿಸಿದೆ. ಹೀಗಿರುವಾಗ, ಕುಮಾರಸ್ವಾಮಿ ಅವರು ಸಂತ್ರಸ್ತರ ಸ್ಥಳವನ್ನು ಬಹಿರಂಗಪಡಿಸುತ್ತಿದ್ದಾರೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವವನ್ನು ಪರೋಕ್ಷವಾಗಿ ರಕ್ಷಿಸುತ್ತಿದ್ದಾರೆ. ಹೀಗಾಗಿಯೇ ಸಂತ್ರಸ್ತರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಈ ಪ್ರಕರಣದ ಕುರಿತು ಹೆಚ್ಚಿನ ವಿವರಗಳು ಕುಮಾರಸ್ವಾಮಿಯವರ ಬಳಿ ಇವೆ. ಹೀಗಾಗಿ ಸಿಐಡಿ ಕುಮಾರಸ್ವಾಮಿಯವರನ್ನೂ ವಿಚಾರಣೆಗೊಳಪಡಿಸಬೇಕೆಂದು ಒತ್ತಾಯಿಸಿದೆ.

ಬಿಜೆಪಿ ಮುಖಂಡ ದೇವರಾಜೇಗೌಡ ಅವರು ತಮ್ಮ ಪಕ್ಷದ ನಾಯಕರಿಗೆ ವೀಡಿಯೋಗಳನ್ನು ರವಾನಿಸಿದ್ದರು, ವಕೀಲರಾಗಿರುವ ಅವರು ಪೊಲೀಸರನ್ನೇ ಕೆ ಸಂಪರ್ಕಿಸಲಿಲ್ಲ? ಗೌಡ ಅವರು ಮಹಿಳಾ ಆಯೋಗವನ್ನಾದರೂ ಸಂಪರ್ಕಿಸಬಹುದಿತ್ತು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಇದೇ ವೇಳೆ ವೀಡಿಯೋಗಳನ್ನು ಹರಿಬಿಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿರುವ ಕುಮಾರಸ್ವಾಮಿ ಮತ್ತು ದೇವರಾಜೇಗೌಡ ಅವರ ಕುರಿತು ಕಿಡಿಕಾರಿರುವ ಅವರು, ಇಬ್ಬರೂ ಸಂತ್ರಸ್ತ ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಬದಲಿಗೆ ಪೆನ್ ಡ್ರೈವ್ ಲೀಕ್ ಮಾಡಿದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಪ್ರಕರಣವನ್ನು ಸಿಬಿಐಗೆ ವಹಿಸುವುದು ಅಪರಾಧದಲ್ಲಿ ಭಾಗಿಯಾದವರನ್ನು ರಕ್ಷಿಸುವುದೇ ಹೊರತು ಬೇರೇನೂ ಅಲ್ಲ. ಸಿಬಿಐ ಮತ್ತು ಇಡಿ ಪ್ರಕರಣವನ್ನು ರದ್ದು ಮಾಡಲು ಬಳಸುವ ಸಂಸ್ಥೆಯಾಗಿ ಮಾರ್ಪಟ್ಟಿದೆ. ಲಲಿತ್ ಮೋದಿ, ವಿಜಯ್ ಮಲ್ಯ ಕಥೆ ಏನಾಯಿತು? ಈ ಏಜೆನ್ಸಿಗಳ ಮೂಲಕ ಬಿಜೆಪಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಕರ್ನಾಟಕ ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು

Latest Indian news

Popular Stories