ಮುಸ್ಲಿಮರ ಮನೆಯಲ್ಲಿ ಇಬ್ಬರು ಮೂವರು ಹೆಂಡತಿಯರು ಇರುತ್ತಾರೆ ಅವರಲ್ಲಿ ಯಜಮಾನಿ ಯಾರಾಗ್ತಾರೆ?  – ಸಂಸದ ಪ್ರತಾಪ್ ಸಿಂಹ ಅವಹೇಳನಕಾರಿ ಹೇಳಿಕೆ

ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡುತ್ತಿರುವ ಕುರಿತು ಟೀಕಿಸುವ ಭರದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮುಸ್ಲಿಮರ ಬಗ್ಗೆ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಮುಸ್ಲಿಮರ ಮನೆಯಲ್ಲಿ ಇಬ್ಬರು-ಮೂವರು ಹೆಂಡತಿಯರು ಇರುತ್ತಾರೆ ಅವರಲ್ಲಿ ಯಾರನ್ನು ಮನೆ ಯಜಮಾನಿ ಎಂದು ಪರಿಗಣಿಸಲಾಗುತ್ತದೆ, ಯಾರಿಗೆ 2000 ರುಪಾಯಿ ಕೊಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಕಾಂಗ್ರೆಸ್‌ನವರು ಉಚಿತ ಘೋಷಣೆಗಳ ಬಗ್ಗೆ ಎಲ್ಲಾ ಊರುಗಳಲ್ಲಿ ತಮಟೆ ಬಾರಿಸಿದ್ದರು. ಎಲ್ಲರಿಗೂ ಉಚಿತ ವಿದ್ಯುತ್ ಎಂದಿದ್ದರು. ಬಸ್ ಪ್ರಯಾಣ ಫ್ರೀ ಎಂದಿದ್ದರು ಆದರೆ ಕೆಎಸ್​​​ಆರ್​​ಟಿಸಿ ಅಧಿಕಾರಿಗಳಿಗೆ ಇನ್ನೂ ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದು ಟೀಕಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ತಲೆ ಮೇಲೆ ಟೋಪಿ ಹಾಕಿಕೊಂಡಿದ್ದವರನ್ನು ಕಾಂಗ್ರೆಸ್‌ನವರು ಎಂದು ಕರೆಯುತ್ತಿದ್ದರು. ಈಗ ಜನರಿಗೆ ಟೋಪಿ ಹಾಕುವರರನ್ನು ಕಾಂಗ್ರೆಸ್‌ನವರು ಎಂದು ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು. ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದರು. ಈಗ ಸರಾಸರಿ ತೆಗೆಯುತ್ತೇವೆ ಎಂದು ಷರತ್ತು ಹಾಕುತ್ತಿದ್ದಾರೆ, ಇದು ಮೋಸ ಮಾಡಿದಂತೆ ಅಲ್ಲವಾ? ಯಾವುದೇ ಷರತ್ತು ಇಲ್ಲದೆ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಕೊಡಬೇಕು ಎಂದು ಹೇಳಿದರು. 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಬಿಲ್ ನೀಡಿ ಎಂದು ಹೇಳಿದರು.

ಗೃಹಲಕ್ಷ್ಮೀ ಯೋಜನೆ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಜನ ಧನ್ ಖಾತೆಗಳನ್ನು ತೆರೆಯಲಾಗಿದೆ. ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಕೂಡ ಲಿಂಕ್ ಆಗಿದೆ. ಆದರೂ, ಗೃಹಲಕ್ಷ್ಮೀ ಯೋಜನೆ ಜಾರಿ ಯಾಕೆ ಮಾಡ್ತಿಲ್ಲ. ಯೋಜನೆ ಮುಂದೂಡಲು ಕುಂಟು ನೆಪ ಹೇಳಲಾಗುತ್ತಿದೆ. ಮನೆ ಯಜಮಾನಿ ಯಾರು ಎಂದು ಹೇಗೆ ತೀರ್ಮಾನ ಮಾಡುವುದು, ಮನೆಯಲ್ಲಿ ಅತ್ತೆ ಸೊಸೆ ಕೂತು ತೀರ್ಮಾನ ಮಾಡಲು ಆಗುತ್ತಾ? ಹಿಂದೂಗಳ ಮನೆಯಲ್ಲಿ ಅತ್ತೆ-ಸೊಸೆ ನಡುವೆ ಪೈಪೋಟಿ ಇದ್ದರೆ, ಮುಸ್ಲಿಮರ ಮನೆಯಲ್ಲಿ ಇಬ್ಬರು ಮೂವರು ಹೆಂಡತಿಯರು ಇರುತ್ತಾರೆ ಅವರಲ್ಲಿ ಯಜಮಾನಿ ಯಾರಾಗ್ತಾರೆ? ಈ ಯೋಜನೆ ಮೂಲಕ ಕಾಂಗ್ರೆಸ್ ಮುಸ್ಲಿಂ ಕುಟುಂಬ ಒಡೆಯುವ ಕೆಲಸ ಮಾಡುತ್ತಿದೆ ಎಂದರು.

ಈಗಾಗಲೇ ಕೇಂದ್ರ ಸರ್ಕಾರ 6 ಕೆಜಿ ಅಕ್ಕಿ ಕೊಡುತ್ತಿದೆ, ಇದಕ್ಕೆ ನಾಲ್ಕು ಕೆಜಿ ಸೇರಿಸಿ 10 ಕೆ.ಜಿ ಕೊಟ್ಟರೆ ಅದು ಕಾಂಗ್ರೆಸ್ ಗ್ಯಾರಂಟಿ ಹೇಗೆ ಆಗುತ್ತದೆ ಎಂದು ಪ್ರಶ್ನೆ ಮಾಡಿದರು. ಸುಭಿಕ್ಷ ಕರ್ನಾಟಕವನ್ನು ಕಾಂಗ್ರೆಸ್ ಭಿಕ್ಷಾ ರಾಜ್ಯ ಮಾಡುತ್ತಿದೆ. ಲೋಕಸಭೆ ಚುನಾವಣೆವರೆಗೂ ಗ್ಯಾರಂಟಿ ಹೆಸರಲ್ಲಿ ರಾಜ್ಯದ ಜನರನ್ನು ಮಂಗ್ಯಾ ಮಾಡುತ್ತಾರೆ. ಕಾಂಗ್ರೆಸ್ ಘೋಷಣೆಗಳಿಂದ ರಾಜ್ಯ ದಿವಾಳಿಯಾಗಲಿದೆ. ಕರ್ನಾಟಕ ರಾಜ್ಯಕ್ಕೆ ಶ್ರೀಲಂಕಾ, ಬಾಂಗ್ಲಾದೇಶದ ಸ್ಥಿತಿ ಬರುವ ಕಾಲ ದೂರವಿಲ್ಲ ಎಂದರು.

ಇದೀಗ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಪ್ರತಿಯೊಂದರಲ್ಲಿ ಜಾತಿ, ಧರ್ಮ ಎಳೆದು ತಂದು ಬೆಳೆ ಬೇಯಿಸಿಕೊಳ್ಳುವುದು ಪ್ರತಾಪ್ ಸಿಂಹ ಚಾಳಿ ಎನ್ನಲಾಗುತ್ತಿದೆ.

Latest Indian news

Popular Stories