ಮೈಸೂರು: ಈಗಲೂ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ಪಕ್ಷದ ಅಭ್ಯರ್ಥಿ ಪರ ಬಂಟಿಂಗ್ಸ್ ಬ್ಯಾನರ್ ಕಟ್ಟಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಮನೆಯ ಎಸಿ ರೂಂನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೆ ಸ್ವಾಗತಿಸದೆ ಇರುವುದಕ್ಕೆ ಆಗುತ್ತಾ?. ರಾಜ – ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಅದನ್ನೆಲ್ಲಾ ಜನರಿಗೆ ಬಿಟ್ಟು ಕೊಡಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯದುವೀರ್ ಹವಾನಿಯಂತ್ರಿತ ವ್ಯವಸ್ಥೆಯೊಳಗೆ ಇದ್ದವರು. ದೊಡ್ಡಗಡಿಯಾರದ ಬಳಿ ಬಿಜೆಪಿ ಕಾರ್ಯಕರ್ತರ ಜತೆ ಕುಳಿತು ಧಿಕ್ಕಾರ ಕೂಗುತ್ತಾರೆ. ರಾಜರಾಗಿದ್ದೂ ಪ್ರಜೆಯಾಗಲು ರೆಡಿ ಆಗಿದ್ದಾರೆ. ಚಾಮುಂಡಿಬೆಟ್ಟಕ್ಕೆ ಹೊಸ ಪೈಪ್ ಲೈನ್ ಆಗಲು ಪ್ರಮೋದಾದೇವಿ ಒಡೆಯರ್ ಬಿಟ್ಟಿರಲಿಲ್ಲ. ಮುಂದೆ ಹೊಸ ಪೈಪ್ ಲೈನ್ ಆಗುತ್ತದೆ ಎಂದು ಪ್ರತಾಪ್ ಸಿಂಹ ಕೆಣಕಿದ್ದಾರೆ.
ಮೈಸೂರಿನ ಲಲಿತ ಮಹಲ್ ಅರಮನೆ, ಸಮೀಪದ ಹೆಲಿಪ್ಯಾಡ್ ಜಾಗ, ಸರ್ವೇ ನಂಬರ್ 4ರ ಸುಮಾರು 1200 ಎಕರೆ ಜಾಗ, ವಿಜಯಶ್ರೀಪುರದ ಮನೆಗಳು, ವಸ್ತು ಪ್ರದರ್ಶನ ಪ್ರಾಧಿಕಾರದ ಜಾಗ ಎಲ್ಲದರ ಬಗ್ಗೆ ವ್ಯಾಜ್ಯಗಳು ಇವೆ. ಯದುವೀರ್ ಜನಪ್ರತಿನಿಧಿಯಾದ್ರೆ ಆ ಎಲ್ಲ ಜಾಗವನ್ನೂ ಜನರಿಗೆ ಬಿಟ್ಟು ಕೊಡಬೇಕಾಗುತ್ತೆ. ಹೀಗಾಗಿ ಯದುವೀರ್ ಅವರನ್ನು ಸ್ವಾಗತ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಿಮ್ಮ ಮನೆ ಕಾಯುವವರಿಗೆ ಟಿಕೆಟ್ ಕೊಡಬೇಕೇ ಹೊರತು ನಾವು ಅವರ ಮನೆ ಕಾಯುವ ಸ್ಥಿತಿ ಬರಬಾರದು ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ಅವರು ಯದುವೀರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ನಾನು ರಿಯಲ್ ಎಸ್ಟೇಟ್ ಮಾಡ್ಲಿಲ್ಲ, ಕಮಿಷನ್ ಪಡೆದಿಲ್ಲ. ಭಟ್ಟಂಗಿಗಳನ್ನು ಕಟ್ಟಿಕೊಂಡು ಓಡಾಡಲಿಲ್ಲ. ಅಭಿವೃದ್ಧಿ ಮಾತ್ರ ಮಾಡಿದ್ದೇನೆ. ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಲಿಲ್ಲ ಎಂದು ಪ್ರತಾಪ್ ಸಿಂಹ ನುಡಿದರು. ಈ ಹಿಂದೆ ಬಿಜೆಪಿಯಿಂದ ಗೆದ್ದವರು ಪಕ್ಷವನ್ನು ಹೇಗೆ ಕಟ್ಟಿದ್ರು, ಎಷ್ಟು ಜನರನ್ನು ಬೆಳೆಸಿದ್ದಾರೆ ಹೇಳಿ? ಎಂದು ಪ್ರಶ್ನಿಸಿದರು.
ಕಾರ್ಯಕರ್ತರೇ ನನ್ನ ದೊಡ್ಡ ಶಕ್ತಿ. ಯಾರು ತಲೆ ಕಡೆಸಿಕೊಳ್ಳಬೇಡಿ. ಗಟ್ಟಿ ಪಿಂಡ ನಾನು. ಯಾವ ಹಿನ್ನೆಲೆಯೂ ಇಲ್ಲದೆ ಇಲ್ಲಿ ತನಕ ಬಂದಿದ್ದೇನೆ. ನಾನು ಪಾರ್ಟಿಗೋಸ್ಕರ ಬಾವುಟ ಕಟ್ಟುತ್ತೇನೆ. ಕೈ ಮುಗಿದು ಬೇಡಿಕೊಳ್ಳುತ್ತೇನೆ, ಲೀಡರ್ ಗಳ ಹಿಂದೆ ಹೋಗಬೇಡಿ. ಪಕ್ಷದ ಜತೆ ಹೋಗಿ. ಅಪಪ್ರಚಾರ ಮಾಡಬೇಡಿ. ನಾನೇ ಆಗಲಿ ಮತ್ತೊಬ್ಬರೇ ಆಗಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.