
ನನ್ನದೇ ಚುನಾವಣೆ ಎಂಬ ರೀತಿಯಲ್ಲಿ ಪ್ರಚಾರ ನಡೆಸುತ್ತೇನೆ; 60,000 ಮತಗಳ ಅಂತರದಲ್ಲಿ ಯಶ್ಫಾಲ್ ಸುವರ್ಣ ಗೆಲ್ಲುತ್ತಾರೆ – ರಘುಪತಿ ಭಟ್
ಉಡುಪಿ: ಬುಧವಾರ ಅಸಮಾಧಾನಗೊಂಡಿದ್ದ ರಘುಪತಿ ಭಟ್ ಬೇಸರ ಶಮನಗೊಂಡಿದ್ದು ಇದೀಗ ನನ್ನದೇ ಚುನಾವಣೆ ಎಂಬ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತೇನೆ ಎಂದು ಹೇಳಿದ್ದಾರೆ.
60,000 ಮತಗಳ ಅಂತರದಲ್ಲಿ ಯಶ್ಫಾಲ್ ಸುವರ್ಣ ಗೆಲ್ಲುತ್ತಾರೆ. ಇವತ್ತಿನಿಂದ ಸಂಘಟನಾತ್ಮಕ ಕಾರ್ಯ ಚಟುವಟಿಕೆ ಪ್ರಾರಂಭ ಮಾಡಲಿದ್ದೇವೆ. ಯಶಪಾಲ್ ಜೊತೆಯಲ್ಲಿ ನಾನು ಚುನಾವಣೆಯ ದಿನದ ವರೆಗೂ ಪ್ರಚಾರ ಕಾರ್ಯ ನಡೆಸುತ್ತೇನೆ.ಪ್ರತಿ ಮಟ್ಟದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುತ್ತೇನೆ ಎಂದರು.
ಎಲ್ಲರೂ ಕೂಡ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತೇವೆ. ಎಲ್ಲಾ ಗೊಂದಲಗಳನ್ನು ಮರೆತು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ನಿನ್ನೆ ನಾನು ಭಾವನಾತ್ಮಕವಾಗಿ ಮಾತನಾಡಿದ್ದೆ. ಬೇಸರದಿಂದ ಮಾತನಾಡಿದ್ದೆ. ಅಪ್ಪ ಅಮ್ಮ ಬೈದಾಗ ಬೇಸರ ಆಗುತ್ತೆ, ಅಮ್ಮನಿಗೆ ವಾಪಸ್ ಬೈತೇವೆ. ಅನಂತರ ಅವರ ಜೊತೆಯಾಗಿ ಮಲಗುತ್ತೇವೆ ಎಂದು ತಮ್ಮ ಕೋಪ ತಣಿದ ಕುರಿತು ತಿಳಿಸಿದ್ದಾರೆ.
ನನ್ನ ಅಭಿಮಾನಿಗಳು ಬಿಜೆಪಿ ಅಭಿಮಾನಿಗಳು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಬೇಡ ನಿಲ್ಲಿಸೋಣ. ಇನ್ನು ಮುಂದೆ ಸುವರ್ಣ ರನ್ನು ಗೆಲ್ಲಿಸುವ ವಾಟ್ಸಪ್ ಮೆಸೇಜ್ ಮಾಡೋಣ. ನೂರಕ್ಕೆ ನೂರು ಉಡುಪಿ ವಿಧಾನಸಭಾ ಕ್ಷೇತ್ರ ಗೆಲ್ಲುತ್ತೇವೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ನನಗೆ ಕರೆ ಮಾಡಿದ್ದರು. ಸಿಎಂ ಮಾತನಾಡಿ ಸರಿಪಡಿಸುವ ವಿಷಯ ಏನು ಇಲ್ಲ. ಯಾವುದೇ ಟ್ರಬಲ್ ಇಲ್ಲ, ಟ್ರಬಲ್ ಶೂಟರ್ ಕೂಡ ಅಗತ್ಯವಿಲ್ಲ. ಪಕ್ಷ ಕೊಟ್ಟ ಅಭ್ಯರ್ಥಿಯ ಜೊತೆ ಕೆಲಸ ಮಾಡುವ ಎರಡನೇ ಅವಕಾಶ ಸಿಕ್ಕಿದೆ ಎಂದರು.
ನಾನು ಅಭ್ಯರ್ಥಿಯಾದರೆ ಎಷ್ಟು ಸ್ಪೀಡ್ ನಲ್ಲಿ ಕೆಲಸ ಮಾಡುತ್ತೇನೋ ಅದೇ ರೀತಿ ಕೆಲಸ ಮಾಡುತ್ತೇನೆ. ಪಕ್ಷ ನಮಗೆ ಒಳ್ಳೆಯ ಅಭ್ಯರ್ಥಿ ಕೊಟ್ಟಿದ್ದಾರೆ. ಪಕ್ಷ ನನಗೆ ಮೂರು ಬಾರಿ ಶಾಸಕನಾಗುವ ಅವಕಾಶ ಕೊಟ್ಟಿದೆ. ಸಾಮಾನ್ಯ ಕುಟುಂಬದಿಂದ ಬಂದವ ಮೂರು ಬಾರಿ ಶಾಸಕನಾಗಿದ್ದು ದೊಡ್ಡ ವಿಷಯ. ಇನ್ನು ಮುಂದೆ ನಾನು ಅಸಮಾಧಾನದ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಯಡಿಯೂರಪ್ಪ ನನಗೆ ಕರೆ ಮಾಡಿದರು. ಅವರು ಕರೆಮಾಡುವ ಮುಂಚೆ ನಾನು ಕೆಲಸ ಆರಂಭಿಸಿದ್ದೆ. ನೀನು ಒಳ್ಳೆ ಕಾರ್ಯಕರ್ತ, ನಿನಗೆ ಒಳ್ಳೆ ಭವಿಷ್ಯ ಇದೆ ಎಂದು ಭರವಸೆ ನೀಡಿದ್ದಾರೆ. ಬಿ ಎಲ್ ಸಂತೋಷ್ ಟ್ವೀಟ್ ಮೂಲಕ ನನ್ನ ನಡೆಯನ್ನು ಪ್ರಶಂಶಿಸಿದ್ದಾರೆ. ಇದು ನನಗೆ ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದರು.
ಯಶಪಾಲ ಸುವರ್ಣ ಮಾತು:
ನಮ್ಮ ಒಗ್ಗಟ್ಟನ್ನು ಜನರ ಮುಂದೆ ಪ್ರದರ್ಶಿಸಿದ್ದೇನೆ. ರಘುಪತಿ ಭಟ್ ಸಂಘದ ಶಿಕ್ಷಣ ಪಡೆದವರು.ರಘುಪತಿ ಭಟ್ ಅಭಿವೃದ್ಧಿ ಕಾರ್ಯ ಜನರ ಮುಂದೆ ತೋರಿಸಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.




