ವಿಜಯಪುರ : ನಾನು ಏನು ಮಾಡಿದ್ದೇನೆ ಎಂಬುದು ನಾನೇ ಹೇಳುವುದು ಸರಿಯಲ್ಲ, ಯಾವ ಮಾನದಂಡ ಆಧಾರದ ಮೇಲೆ ನನಗೆ ಟಿಕೆಟ್ ಕೊಡಲಿಲ್ಲ ಎಂಬುದು ಇನ್ನುವರೆಗೂ ಪಕ್ಷದ ಹೈಕಮಾಂಡ್ ಸ್ಪಷ್ಟಪಡಿಸಿಲ್ಲ. ಕಳೆದ ಬಾರಿಯೂ ನನಗೆ ಮೊಸವಾಯಿತು, ಯತ್ನಾಳ್ ಅವರು ಗೆದ್ದು ಬಂದ ಮೇಲೆ ಪಾರ್ಟಿ ಸಭೆಗೆ ಬರಲಿಲ್ಲ, ಸೊಕ್ಕಿನ ಮಾತುಗಳೇ ಬರತೊಡಗಿದವು, ಪಾರ್ಟಿ ಅವರೂ ಕೂಡ ಇವರನ್ನು ಹೊರಗಿಟ್ಟ ತೊಡಗಿದ ಮೇಲೆ ನನಗೆ ಮತ್ತೆ ಶಾಸಕನಾಗುವ ಆಸೆ ಹುಟ್ಟಿತ್ತು, ಆದರೆ ಪಕ್ಷವನ್ನು ನಂಬಿಯೇ ನನಗೆ ಇವತ್ತು ಮೊಸವಾಗಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಗರದ ಆಲಕುಂಟ ಮಂಗಳ ಕಾರ್ಯಾಲಯದಲ್ಲಿ
ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಸ್ವಾಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ನನ್ನನು ಸೋಲಿಸಬೇಕೆಂದೆ ಜೆಡಿಎಸ್ ಪಕ್ಷದಿಂದ ಅವರು ಸ್ಪರ್ಧಿಸಿದ್ದರು. ತಾವು ದೇವರಹಿಪ್ಪರಗಿ ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಿಂದ ಸೋತಿದ್ದನ್ನು ಮರೆತಿದ್ದಾರೆ ಅಂತ ವ್ಯಂಗವಾಡಿದರು.
ನಿಮ್ಮ ಪ್ರೀತಿ ಹಾಗೂ ಅಭಿಮಾನ ಹೀಗೆಯೇ ಇರಲಿ, ಅವರನ್ನು ಕಟ್ಟಿ ಹಾಕಬೇಕಾದರೆ ನಾನೇ ಬೇಕು ಎಂಬುದು ನನಗೆ ಗೊತ್ತಿದೆ. ನಿಮ್ಮ ಎಲ್ಲಾ ಅಭಿಮಾನಕಮ್ ಋಣಿಯಾಗಿದ್ದೇನೆ, ಒಂದಂತೂ ಸತ್ಯ ಆ ಮನುಷ್ಯ ಮುಂದಿನ ದಿನಗಳಲ್ಲಿ ಅಧಿಕಾರದಲ್ಲಿ ಇರುವುದಿಲ್ಲ ಎಂಬುದು ಸತ್ಯ ಎಂದು ಭವಿಷ್ಯ ನುಡಿದರು.
ಇದಕ್ಕೂ ಮೊದಲು ಮಾತನಾಡಿದ ಮಾಜಿ ನಗರಸಭೆ ಅಧ್ಯಕ್ಷ ಭೀಮಾಶಂಕರ ಅದನೂರು, ಯತ್ನಾಳ ಅವರು ಹಿಂದೆ ಏನಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಅವರು ರಾಜಕೀಯ ಜೀವನ ಪ್ರಾರಂಭವಾಗಿರುವುದೇ ಬಣಜಿಗ ಸಮಾಜದಿಂದ ಎಂಬುದನ್ನು ಮರೆಯಬಾರದು. ನಾವೆಲ್ಲರೂ ಜಿಲ್ಲೆಯಲ್ಲಿ ಹಾಗೂ ವಿಜಯಪುರ ನಗರದಲ್ಲಿ ಸಹೋದರರಂತೆ ಬಾಳುತ್ತಿದ್ದೆವು. ಆದರೆ ಇಂದಿನ ಶಾಸಕರಿಂದ ಅದು ಸಾಧ್ಯವಾಗ್ತಿಲ್ಲ. ಅವರೊಬ್ಬ ಡೋಂಗಿ ಹಿಂದುತ್ವವಾದಿ ಹಾಗೂ ನಕಲಿ ಪಂಚಮಸಾಲಿ ಹೋರಾಟಗಾರ ಎಂದು ಟೀಕಿಸಿದರು.
ಪಂಚಮಸಾಲಿ ಸಮಾಜದ ಮುಖಂಡ ರವಿ ಬಗಲಿ ಮಾತನಾಡಿ, ಇವರು ಹಿರಿ ಕಿರಿಯರೆನ್ನದೆ ಏಕ ವಚನದಲ್ಲಿ ಮಾತನಾಡುತ್ತಾರೆ, ನಮಗೆ ನಮ್ಮ ಹೆಂಡತಿಯರೆ ಮತ ಹಾಕುವುದಿಲ್ಲ ಅಂತ ಹೇಳ್ತಾರೆ, ನಮಗೂ ಚುನಾವಣೆ ಏನು ಎಂಬುದು ಗೊತ್ತಿದೆ, ನಾವು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದೆ ಬಂದಿರೋದು ಅಂತ ತಿರುಗೇಟು ನೀಡಿದರು.
ಈ ಸಭೆಯಲ್ಲಿ ರವಿಕಾಂತ ಬಗಲಿ, ರಾಜು ಬಿರಾದಾರ, ರಾಜು ವಾಲಿ, ನಾಗರಾಜ ಲಂಬೂ, ಭಿಮಾಶಂಕರ ಹದನೂರ್, ರವೀಂದ್ರ ಬಿಜ್ಜರಗಿ ಸೇರಿದಂತೆ ಎಲ್ಲ ಸಮಾಜದ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ವಿಧಾನಸಭೆ ಚುನಾವಣೆ: ವಿಜಯಪುರ ಜಿಲ್ಲೆಯಲ್ಲಿ ಮೊದಲನೇ ದಿನ 17 ನಾಮಪತ್ರ ಸಲ್ಲಿಕೆ
ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಮೊದಲನೇ ದಿನವಾದ ಏಪ್ರಿಲ್ 13 ಗುರುವಾರದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ.
26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 01, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 01, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 01, 29-ಬಬಲೇಶ್ವರ ಮತಕ್ಷೇತ್ರದಿಂದ 01, 30-ಬಿಜಾಪುರ ನಗರ ಮತಕ್ಷೇತ್ರದಿಂದ 2, 31-ನಾಗಠಾಣ (ಎಸ್‍ಸಿ) ಮತಕ್ಷೇತ್ರದಿಂದ 4, 32-ಇಂಡಿ ಮತಕ್ಷೇತ್ರದಿಂದ 04 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ 03 ನಾಮಪತ್ರಗಳು ಸೇರಿದಂತೆ ಒಟ್ಟು 17 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.
ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ ಅಪ್ಪಾಜಿ ಅಲಿಯಾಸ ಚನ್ನಬಸವರಾಜ ನಾಡಗೌಡ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್), ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದಿಂದ ಶಿವಾನಂದ ಯಡಹಳ್ಳಿ (ಕೆಆರ್‍ಎಸ್), ಬಸವನಬಾಗೇವಾಡಿ ವಿಧಾನ ಸಭಾ ಮತಕ್ಷೇತ್ರದಿಂದ ಶಿವಾನಂದ ಪಾಟೀಲ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಬಲೇಶ್ವರ ವಿಧಾನ ಸಭಾ ಮತಕ್ಷೇತ್ರದಿಂದ ಬಸಪ್ಪ ಹೊನವಾಡ (ಜನತಾದಳ (ಜಾತ್ಯಾತೀತ)), ಬಿಜಾಪುರ ನಗರ ವಿಧಾನ ಸಭಾ ಮತಕ್ಷೇತ್ರದಿಂದ ಕಲ್ಲಪ್ಪ ರೇವಣಸಿದ್ದಪ್ಪ ಕಡೇಚೂರ (ಪಕ್ಷೇತರ) ಹಾಗೂ ಮಲ್ಲಿಕಾರ್ಜುನ ಭೀಮಪ್ಪ/ರೇಣುಕಾ ಕೆಂಗನಾಳ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಗಠಾಣ ಮತಕ್ಷೇತ್ರದಿಂದ ಕವಿತಾ ವಿ.ಕಟಕಧೋಂಡ (ರಾಣಿ ಚೆನ್ನಮ್ಮ ಪಾರ್ಟಿ), ಅರುಣಾ ಗಂಗಾರಾಮ ಕಟಕಧೋಂಡ (ಪಕ್ಷೇತರ), ವೇಂಕಟೇಶ್ವರ ಮಹಾಸ್ವಾಮೀಜಿ ಕಟಕಧೋಂಡ (ಭಾರತೀಯ ಜನತಾ ಪಾರ್ಟಿ) ಹಾಗೂ ವೇಂಕಟೇಶ್ವರ ಮಹಾಸ್ವಾಮೀಜಿ ಕಟಕಧೋಂಡ (ಹಿಂದೂಸ್ತಾನ ಜನತಾ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇಂಡಿ ವಿಧಾನಸಭಾ ಮತಕ್ಷೇತ್ರದಿಂದ ಯಶವಂತರಾಯಗೌಡ ಪಾಟೀಲ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್) 02 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಸವರಾಜ ಪಾಟೀಲ ಉರ್ಫ ಗೌಡರ (ಜನತಾದಳ ಜಾತ್ಯಾತೀತ) ಹಾಗೂ ಅಶೋಕ ಜಾಧವ (ಕರ್ನಾಟಕ ರಾಷ್ಟ್ರ ಸಮಿತಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಸಿಂದಗಿ ವಿಧಾನಸಭಾ ಮತಕ್ಷೇತ್ರದಿಂದ ಭೂಸನೂರ ರಮೇಶ ಬಾಳಪ್ಪ (ಭಾರತೀಯ ಜನತಾ ಪಾರ್ಟಿ), ಅಶೋಕ ಮಲ್ಲಪ್ಪ ಮನಗೂಳಿ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್) ಹಾಗೂ ದಸ್ತಗೀರ ಬಾಷಾ ಮಕಾನದಾರ (ಬಹುಜನ ಸಮಾಜ ಪಾರ್ಟಿ) ಅವರು ನಾಮತ್ರ ಸಲ್ಲಿಸಿದ್ದಾರೆ.