ಚೆನ್ನೈ, ಡಿಸೆಂಬರ್, 01: ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕೆಲವು ದಿನಗಳಿಂದ ಅಬ್ಬರದ ಮಳೆಯಾಗುತ್ತಿದೆ. ಅದರಲ್ಲೂ ತಮಿಳುನಾಡು, ಕೇರಳ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಇನ್ನು ಮುಂದಿನ 5 ದಿನ ಭಾರೀ ಮಳೆ ಮುಂದುವರೆಯುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನ ಹಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜೆ ಅಲರ್ಟ್ ಘೋಷಣೆ ಮಾಡಿದೆ. ಹಾಗಾದರೆ ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಡಿಸೆಂಬರ್ 4ರಂದು ತಿರುವಳ್ಳೂರ್‌ನಲ್ಲಿ 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅದೇ ದಿನ ಚೆನ್ನೈ, ಕಾಂಚೀಪುರಂ, ಚೆಂಗಲ್‌ಪಟ್ಟು ಮತ್ತು ರಾಣಿಪೇಟ್ ಜಿಲ್ಲೆಗಳಲ್ಲಿ 6 ಸೆಂ.ಮೀ ನಿಂದ 20 ಸೆಂ.ಮೀಟರ್‌ವರೆಗೆ ಅತಿ ಹೆಚ್ಚು ಮಳೆಯಾಗುವ ಹಿನ್ನೆಲೆ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ‘ಮೈಚಾಂಗ್’ ಚಂಡಮಾರುತದ ಪ್ರಭಾವ ಡಿಸೆಂಬರ್ 4ರ ವೇಳೆಗೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಅಂದು ತಿರುವಳ್ಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಉಪ ಮಹಾನಿರ್ದೇಶಕ ಎಸ್.ಬಾಲಚಂದ್ರನ್ ತಿಳಿಸಿದ್ದಾರೆ.
ಉತ್ತರ ಕರಾವಳಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಡಿಸೆಂಬರ್ 3 ಹಾಗೂ 4ರಂದು ಅತ್ಯಂತ (204.4 ಮಿಮೀ ಮೇಲೆ) ಭಾರೀ ಮಳೆ ಬೀಳುವ ಸಾಧ್ಯತೆಯಿದೆ. ಈ ಸಮಯದಲ್ಲಿ ತಿರುವಳ್ಳೂರು ಜಿಲ್ಲೆಯಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಬಾಲಚಂದ್ರನ್ ತಿಳಿಸಿದ್ದಾರೆ.
ಮುಂದಿನ 4 ದಿನಗಳ ಕಾಲ ಭಾರೀ ಮಳೆ
ಅಲ್ಲದೆ, ಮುಂದಿನ ನಾಲ್ಕು ದಿನಗಳ ಕಾಲ ಉತ್ತರ ತಮಿಳುನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಮತ್ತು ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಪ್ರತ್ಯೇಕ ಮಳೆಯಾಗಬಹುದು. ಡಿಸೆಂಬರ್ 3ರಂದು, ತಿರುವಳ್ಳೂರ್, ಚೆನ್ನೈನಿಂದ ಆರಂಭಗೊಂಡು ಕಡಲೂರು, ವೆಲ್ಲೂರು, ತಿರುವಣ್ಣಾಮಲೈ ಕಲ್ಲಕುರಿಚಿ, ಪೆರಂಬಲೂರು ಮತ್ತು ಡೆಲ್ಟಾ ಜಿಲ್ಲೆಗಳ ಉತ್ತರ ಕರಾವಳಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ ಎಂದು ಮುನ್ಸೂಚನೆ ನೀಡಿದೆ.
ವಾಯಭಾರ ಕುಸಿತ
ಬಂಗಾಳಕೊಲ್ಲಿಯಲ್ಲಿ ಶುಕ್ರವಾರ (ಡಿಸೆಂಬರ್ 01) ವಾಯಭಾರ ಕುಸಿತ ಉಂಟಾಗಿದ್ದು, ಅದು ಇನ್ನೆರಡು ದಿನದಲ್ಲಿ ಚಂಡಮಾರುತವಾಗಿ ಮಾರ್ಪಾಡುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತ ಆಂಧ್ರಪ್ರದೇಶದ ಮಚಲಿಪಟ್ಟಣಂ ಮತ್ತು ಚೆನ್ನೈ ನಡುವೆ ಡಿಸೆಂಬರ್ 4ರ ಸಂಜೆಯ ವೇಳೆಗೆ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಂದು ಮುಂಜಾನೆ 5:30ಕ್ಕೆ ಚಂಡಮಾರುತ ಚೆನ್ನೈನಿಂದ 800 ಕಿಲೋ ಮೀಟರ್, ಮಚಲಿಪಟ್ಟಣದಿಂದ 970 ಕಿಲೋ ಮೀಟರ್, ಆಂಧ್ರಪ್ರದೇಶದ ಬಾಪಟ್ಲಾದಿಂದ 990 ಕಿ.ಮೀ. ಮತ್ತು ಪುದುಚೇರಿಯಿಂದ 790 ಕಿ.ಮೀ.ದೂರದಲ್ಲಿ ಸಮುದ್ರದಲ್ಲಿ ಕೇಂದ್ರಿಕೃತವಾಗಿತ್ತು. ಇದು ಪಶ್ಚಿಮ ಮತ್ತು ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಡಿಸೆಂಬರ್ 2 ಮತ್ತು 3ರ ನಡುವೆ ತೀವ್ರ ಸ್ವರೂಪದ ಚಂಡಮಾರುತವಾಗಿ ರೂಪುಗೊಳ್ಳಲಿದೆ.
ಬಳಿಕ ಅದೇ ದಿಕ್ಕಿನಲ್ಲಿ ಚಲಿಸಿ ಡಿಸೆಂಬರ್ 4ರ ಸಂಜೆ ದಕ್ಷಿಣ ಆಂಧ್ರಪ್ರದೇಶ ಮತ್ತು ಪಕ್ಕದ ಉತ್ತರ ತಮಿಳುನಾಡು ಕರಾವಳಿಯನ್ನು ದಾಟಲಿದೆ. ವಾಯುಭಾರ ಕುಸಿತದಿಂದಾಗಿ ಬಂಗಾಳಕೊಲ್ಲಿ ಸಮುದ್ರದ ಕಡಿಮೆ ಒತ್ತಡ ವಲಯದಲ್ಲಿ ಶನಿವಾರ (ಡಿಸೆಂಬರ್ 03) ವೇಳೆಗೆ ಚಂಡಮಾರುತ ಮೂಡುವ ಸಾಧ್ಯತೆಗಳಿವೆ ಎಂದು ತಿಳಿಸಿದೆ. ಇದರ ಪರಿಣಾಮ, ತಮಿಳುನಾಡಿನ ವಿವಿಧೆಡೆ ಮುಂದಿನ 5 ದಿನ ಧಾರಕಾರ ಮಳೆಯಾಗಬಹುದು ಎಂದು ಮುನ್ಸೈಚನೆ ನೀಡಿದೆ. ಮೊನ್ನೆಯಷ್ಟೇ ಭಾರೀ ಮಳೆ ಸುರಿದಿದ್ದು, ಚೆನ್ನೈ ಮತ್ತು ನೆರೆಯ ತಿರುವಲ್ಲೂರು, ಕಾಂಚೀಪುರ, ಚೆಂಗಾಲಪಟ್ಟು ಜಿಲ್ಲೆಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪುತಿತ್ತು. ಇದೀಗ ಮತ್ತೆ ಅಸ್ತವ್ಯಸ್ತವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.