ಕರಾವಳಿಯಲ್ಲಿ ಇಬ್ಬರು ಮೃತ್ಯು, ಕೃತಕ ನೆರೆ ಸಂಕಷ್ಟ – ಜೂನ್ 8 ವರೆಗೆ ಸುರಿಯಲಿದೆ ಭಾರೀ ಮಳೆ

ಮಂಗಳೂರು/ಉಡುಪಿ: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರ ಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರ್ದ್ರಾ ನಕ್ಷತ್ರದ ಕೊನೆಯ ಪಾದದಲ್ಲಿ ಒಂದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸೋಮ ವಾರ ಬಿರುಸುಗೊಂಡಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಾನಿ ಉಂಟಾಗಿದೆ.

ಶಿರ್ವದ ಬಳಿ ಆವರಣಗೋಡೆ ಇಲ್ಲದ ಬಾವಿಯ ಮಣ್ಣು ಕುಸಿದು ಬಾವಿಗೆ ಬಿದ್ದು ಗುಲಾಬಿ (43) ಮೃತಪಟ್ಟಿದ್ದಾರೆ. ಕುಂಬಳೆ ಸಮೀಪದ ಅಂಗಡಿ ಮೊಗರಿನಲ್ಲಿ ಗಾಳಿ ಮಳೆಯಿಂದಾಗಿ ಮರ ಉರುಳಿ ಆಯಿಷತ್‌ ಮಿನ್ಹಾ (11) ಸಾವನ್ನಪ್ಪಿದ್ದಾಳೆ.

ಮಳೆಯಿಂದಾಗಿ ಮಂಗಳೂರು ನಗರದಲ್ಲಿ ಅವಾಂತರಗಳ ಸರಮಾಲೆಯೇ ಉಂಟಾಗಿದ್ದು, ಪಂಪ್‌ವೆಲ್‌ನಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಹಲವು ತಾಸುಗಳ ಕಾಲ ಸಂಚಾರಕ್ಕೆ ತೊಡಕು ಉಂಟಾಯಿತು. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪಂಪ್‌ವೆಲ್‌ ಪ್ಲೈಓವರ್‌ ಕೆಳಭಾಗದಲ್ಲಿ ಸೋಮವಾರ ಸಂಜೆ ನೆರೆ ನೀರು ತುಂಬಿ ಭಾರೀ ಸಮಸ್ಯೆಯಾಯಿತು. ಪ್ಲೈಓವರ್‌ ಕೆಳಗೆ ಸುಮಾರು 3 ಅಡಿಗಳಷ್ಟು ನೀರು ನಿಂತು ಆತಂಕ ಸೃಷ್ಟಿಸಿತು. ಸುಮಾರು ಒಂದು ತಾಸು ನಿರಂತರ ಸುರಿದ ಮಳೆ ಯಿಂದಾಗಿ ಹತ್ತಿರದ ರಾಜಕಾಲುವೆ ಉಕ್ಕಿ ಹರಿದು ಸಮಸ್ಯೆಗೆ ಕಾರಣವಾಯಿತು. ಪ್ಲೈಓವರ್‌ನ ಎರಡೂ ಭಾಗದ ಸರ್ವೀಸ್‌ ರಸ್ತೆಗಳು ಹಾಗೂ ಅಕ್ಕಪಕ್ಕದ ಪ್ರದೇಶವೂ ಜಲಾ ವೃತಗೊಂಡಿತು. ನಾಲ್ಕೂ ಭಾಗದ ವಾಹನಗಳು ಕಿ.ಮೀ.ಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾಯಿತು.

ಉಡುಪಿ ಜಿಲ್ಲೆಯಲ್ಲಿಯೂ ಹಲವು ಕಡೆ ಮನೆಗಳ ಮೇಲೆ ಮರ ಉರುಳಿದ, ಆವರಣ ಗೋಡೆ ಕುಸಿದ, ನೆರೆಯಿಂದ ಸಂಕಷ್ಟ ಉಂಟಾದ ಘಟನೆಗಳು ನಡೆದಿವೆ.

ಕರಾವಳಿಯಲ್ಲಿ ಜು. 8ರ ವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಆರೆಂಜ್‌ ಅಲರ್ಟ್‌ ಘೋಷಿಸಿದೆ. ಈಗಾಗಲೇ ಉಭಯ ಜಿಲ್ಲೆಗಳಲ್ಲಿ ಕಾಳಜಿ ಕೇಂದ್ರ ಗಳನ್ನು ಸನ್ನದ್ಧಗೊಳಿಸಲಾಗಿದೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಎಸ್‌ಡಿಆರ್‌ಎಫ್‌ನ 65, ಎನ್‌ಡಿಆರ್‌ಎಫ್‌ನ 25 ಮಂದಿಯ ತಂಡ ಸನ್ನದ್ಧವಾಗಿದೆ. 26 ಬೋಟ್‌ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

Latest Indian news

Popular Stories