ಅವೈಜ್ಞಾನಿಕವಾಗಿ ಬೇಕಾಬಿಟ್ಟಿ ಆಳವಾದ ಹೊಂಡ ತೆಗೆದು ಸಂತೆಕಟ್ಟೆ ಸರ್ವಿಸ್ ರಸ್ತೆ ಕುಸಿತ: ರಾಷ್ಟ್ರೀಯ ಹೆದ್ದಾರಿ ಕಡಿತವಾದರೆ ಸಂಸದೆ ಶೋಭಾ ಕರಂದ್ಲಾಜೆ ಹೊಣೆ – ರಮೇಶ್ ಕಾಂಚನ್ ಆಗ್ರಹ

ಕೇಂದ್ರ ಸರಕಾರದ ಅಧಿಕಾರಿಗಳ ಅವೈಜ್ಞಾನಿಕ ವರ್ತನೆಯಿಂದ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಸರ್ವಿಸ್ ರಸ್ತೆ ಕುಸಿದಿದ್ದು ಮುಂದಿನ ದಿನಗಳಲ್ಲಿ ಈ ಪರಿಸರದ ರಾಷ್ಟ್ರೀಯ ಹೆದ್ದಾರಿಯೇ ಕಡಿತಗೊಂಡರೆ ಇದಕ್ಕೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇರ ಹೊಣೆಯಾಗುತ್ತಾರೆ ಎಂದು ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂತೆಕಟ್ಟೆ ಭಾಗದಲ್ಲಿ ಸ್ಥಳೀಯರನ್ನು ಯಾವುದೇ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಇಲ್ಲಿನ ಧಾರಣಾ ಸಾಮರ್ಥ್ಯವನ್ನು ಪರಿಶೀಲಿಸದೆ ಅವೈಜ್ಞಾನಿಕವಾಗಿ ಬೇಕಾಬಿಟ್ಟಿ ಆಳವಾದ ಹೊಂಡವನ್ನು ತೆಗೆದ ಪರಿಣಾಮ ಇಲ್ಲಿನ ಸರ್ವಿಸ್ ರಸ್ತೆ ಕುಸಿತ ಕಂಡಿದೆ. ಕೇಂದ್ರದ ಸಚಿವರು ಹಾಗೂ ಸಂಸದೆಯಾದ ಶೋಭಾ ಕರಂದ್ಲಾಜೆ ಅವರು ಯಾವಾಗಲೂ ಗಟ್ಟಿ ದನಿಯುಳ್ಳವರಾಗಿದ್ದು ಈ ರಸ್ತೆ ವಿಚಾರದಲ್ಲಿ ಕೂಡ ತಮ್ಮ ಅದೇ ದಾಟಿಯನ್ನು ಉಪಯೋಗಿಸಿದರೆ ಮುಂದೆ ಆಗಲಿರುವ ದುರಂತವನ್ನು ತಪ್ಪಿಸಬಹುದು.

ಜಿಲ್ಲೆಯಲ್ಲಿ ನೆರೆಪರಿಸ್ಥಿತಿ ಬಂದು ಜೀವಹಾನಿಯಾದರೂ ಕೂಡ ಈ ಕಡೆ ಮುಖ ಮಾಡದ ಸಂಸದರು ಸಂತೆಕಟ್ಟೆಯ ರಸ್ತೆಯ ವಿಚಾರಕ್ಕಾದರೂ ಕೂಡಲೇ ಇಲ್ಲಿಗೆ ಬಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳನ್ನು ಕರೆಸಿ ಇದಕ್ಕೆ ಅತೀ ಶೀಘ್ರದಲ್ಲಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು. ಶೋಭಾ ಕರಂದ್ಲಾಜೆ ಅವರು ಬೇರೆಯವರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಇನ್ನಾದರೂ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿ. ಉಡುಪಿಯ ಶಾಸಕರು ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೇವಲ ಸ್ಥಳಕ್ಕೆ ಭೇಟಿ ನೀಡುವುದನ್ನು ಬಿಟ್ಟು ಕೇಂದ್ರದೊಂದಿಗೆ ಸಂಪರ್ಕ ಸಾಧಿಸಿ ಸೂಕ್ತ ವ್ಯವಸ್ಥೆಯನ್ನು ಕೂಡಲೇ ಮಾಡಿ ಜನರಿಗೆ ಸರಿಯಾದ ರಸ್ತೆ ನಿರ್ಮಿಸುವಲ್ಲಿ ಶ್ರಮ ವಹಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Latest Indian news

Popular Stories