ಸಾಲ ಮರುಪಾವತಿಸಿದ 30 ದಿನದೊಳಗೆ ಆಸ್ತಿ ದಾಖಲೆ ವಾಪಸ್ ನೀಡಿ; ತಡ ಮಾಡಿದರೆ ದಿನಕ್ಕೆ 5 ಸಾವಿರ ರು. ದಂಡ: RBI

ಮುಂಬಯಿ: ಸಾಲವನ್ನು ಪಾವತಿಸಿದ ನಂತರವೂ ತಮ್ಮ ಆಸ್ತಿ ದಾಖಲೆಗಳನ್ನು ಹಿಂದಿರುಗಿಸದೇ ಬ್ಯಾಂಕ್‌ಗಳು ಸತಾಯಿಸುತ್ತಿವೆ ಎಂಬ ಆರೋಪ ಸಂಬಂಧ ಮಧ್ಯ ಪ್ರವೇಶಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರ ನೆರವಿಗೆ ಧಾವಿಸಿದೆ.

ಈ ಸಂಬಂಧ ಸೆಪ್ಟೆಂಬರ್ 13 ರಂದು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿರುವ ಕೇಂದ್ರೀಯ ಬ್ಯಾಂಕ್‌, ಸಂಪೂರ್ಣ ಮರುಪಾವತಿ ಮತ್ತು ಸಾಲದ ಖಾತೆಯನ್ನು ಮುಚ್ಚಿದ ನಂತರ ಎಲ್ಲಾ ಚರ ಅಥವಾ ಸ್ಥಿರ ಆಸ್ತಿ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಹೇಳಿದೆ. ಅಲ್ಲದೆ, ಮೂಲ ದಾಖಲೆಗಳನ್ನು ನೀಡಲು ವಿಳಂಬ ಮಾಡಿದರೆ ಪ್ರತಿದಿನ 5,000 ರೂ.ನಂತೆ ಸಾಲ ಪಡೆದವರಿಗೆ ಪರಿಹಾರ ನೀಡಬೇಕು ಎಂದು ಆರ್ ಬಿಐ ತಿಳಿಸಿದೆ.

ಸಾಲಗಾರರು ಸಕಾಲದಲ್ಲಿ ಸಾಲ ಮರುಪಾವತಿಸಿದ ನಂತರವೂ ಬ್ಯಾಂಕ್‌ಗಳು ಆಸ್ತಿ ದಾಖಲೆಗಳನ್ನು ನೀಡಲು ಸತಾಯಿಸುತ್ತಿದ್ದವು. ಇಂಥ ಸಂದರ್ಭದಲ್ಲಿ ಆರ್‌ಬಿಐ ಈ ನಿರ್ದೇಶನ ನೀಡಿದ್ದು, ಇದು ಎಲ್ಲಾ ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಎಲ್ಲಾ ಪ್ರಾಥಮಿಕ (ನಗರ) ಸಹಕಾರಿ ಬ್ಯಾಂಕುಗಳು, ಎಲ್ಲಾ ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಎಲ್ಲಾ ಎನ್‌ಬಿಎಫ್‌ಸಿಗಳು ಮತ್ತು ಎಲ್ಲಾ ಆಸ್ತಿ ಪುನರ್‌ ನಿರ್ಮಾಣ ಸಮಸ್ಥೆಗಳು ಸೇರಿದಂತೆ ಎಲ್ಲಾ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯಿಸುತ್ತದೆ.

ಸಾಲ ನೀಡುವ ಸಂಸ್ಥೆಗಳು ವಿಭಿನ್ನ ಅಭ್ಯಾಸಗಳನ್ನು ಅನುಸರಿಸುತ್ತಿರುವುನ್ನು ಗಮನಿಸಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ನಿರ್ದೇಶನ ನೀಡಿದೆ. ಸಾಲಗಾರರನ್ನು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಜವಾಬ್ದಾರಿಯುತ ಸಾಲ ನೀಡುವಿಕೆ ಪ್ರಕ್ರಿಯೆಯನ್ನು ಉತ್ತೇಜಿಸಲು ಆರ್ ಬಿಐ ಇಂದು (ಸೆ.13) ಕೆಲವು ನಿರ್ದೇಶನಗಳನ್ನು ಬಿಡುಗಡೆಗೊಳಿಸಿದೆ. ಕೆಲವೊಂದು ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿ ಮಾಡಿದ ಬಳಿಕ ಕೂಡ ದಾಖಲೆಗಳನ್ನು ಹಿಂತಿರುಗಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರ್ ಬಿಐ ಈ ಸೂಚನೆಗಳನ್ನು ನೀಡಿದೆ.

ಇನ್ನು ಸಾಲಗಾರರು ಚರ ಅಥವಾ ಸ್ಥಿರ ಆಸ್ತಿಯ ಮೂಲದಾಖಲೆಗಳನ್ನು ಸಾಲ ಪಡೆದಿರುವ ಬ್ಯಾಂಕ್ ಔಟ್ ಲೆಟ್ ಅಥವಾ ಶಾಖೆಯಿಂದ ಪಡೆಯಬಹುದು. ಇಲ್ಲವೇ ದಾಖಲೆಗಳು ಲಭ್ಯವಿರುವ ಬ್ಯಾಂಕಿನ ಇತರ ಯಾವುದೇ ಕಚೇರಿಯಿಂದ ಕೂಡ ಇವುಗಳನ್ನು ಪಡೆಯಬಹುದು ಎಂದು ಆರ್ ಬಿಐ ತಿಳಿಸಿದೆ. ಇನ್ನು ಒಂಟಿ ಅಥವಾ ಜಂಟಿ ಸಾಲಗಾರರಲ್ಲಿ ಯಾರೇ ಮೃತರಾದ ಸಂದರ್ಭದಲ್ಲಿ ಬ್ಯಾಂಕ್ ಚರ ಹಾಗೂ ಸ್ಥಿರ ಆಸ್ತಿಗಳ ಮೂಲದಾಖಲೆಗಳನ್ನು ಕಾನೂನುಬದ್ಧ ವಾರಸುದಾರರಿಗೆ ನೀಡಲು ಸಮರ್ಪಕವಾದ ಪ್ರಕ್ರಿಯೆಯನ್ನು ಅನುಸರಿಸಬೇಕು.

ಒಂದು ವೇಳೆ ಮೂಲ ಚರ ಅಥವಾ ಸ್ಥಿರ ಆಸ್ತಿ ದಾಖಲೆಗಳು ಕಳೆದು ಹೋಗಿದ್ದರೆ ಅಥವಾ ಅವುಗಳಿಗೆ ಹಾನಿಯಾಗಿದ್ದರೆ ನಿಯಂತ್ರಣ ಪ್ರಾಧಿಕಾರಗಳು ನಕಲಿ ಅಥವಾ ದೃಢೀಕೃತ ದಾಖಲೆಗಳನ್ನು ಪಡೆಯಲು ನೆರವು ನೀಡಬೇಕು ಎಂದು ಆರ್ ಬಿಐ ತಿಳಿಸಿದೆ. ಇನ್ನು ದಾಖಲೆಗಳು ಕಳೆದು ಹೋಗಿರುವ ಸಂದರ್ಭದಲ್ಲಿ ಆರ್ ಇಗಳಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ 30 ದಿನಗಳ ಕಾಲಾವಕಾಶ ಸಿಗಲಿದೆ ಎಂದು ಆರ್ ಬಿಐ ತಿಳಿಸಿದೆ.

Latest Indian news

Popular Stories