ರೇವಣ್ಣ ಪ್ರಕರಣ: ವಾದ-ಪ್ರತಿವಾದ ನೋಡಿ

ಬೆಂಗಳೂರು: ಭಯೋತ್ಪಾದಕರನ್ನು ಶಿಕ್ಷಿಸುವ ಉದ್ದೇಶದಿಂದ ಐಪಿಸಿ ಸೆಕ್ಷನ್ 364ಕ್ಕೆ ತಿದ್ದುಪಡಿ ತರಲಾಗಿತ್ತು. ಈ ಸೆಕ್ಷನ್’ನ್ನು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಪ್ರಯೋಗಿಸಲಾಗಿದೆ ಎಂದು ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಗುರುವಾರ ವಿಶೇಷ ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.

ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಕೆ.ಆರ್.‌ ನಗರದ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ.

ಸಾಕಷ್ಟು ವಾದ–ಪ್ರತಿವಾದದ ಬಳಿಕ ಜನಪ್ರತಿನಿಧಿಗಳ ಕೋರ್ಟ್, ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದಿದೆ.

ಎಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್, ಸೋಮವಾರ ಬೆಳಗ್ಗೆ 11.30ಕ್ಕೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸುವುದಾಗಿ ಮುಂದೂಡಿದೆ.

ಕೋರ್ಟ್‌ಗೆ ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಸೋಮವಾರ ಸಮಯ ವ್ಯರ್ಥ ಮಾಡದೆ ಮಾಹಿತಿ ನೀಡುತ್ತೇವೆ. ಸೋಮವಾರದವರೆಗೆ ವಿಚಾರಣೆ ಮುಂದೂಡಬೇಕೆಂದು ವಿಶೇಷ ಸಾರ್ವಜನಿಕ ಅಭಿಯೋಜಕರು (ಎಸ್‌ಪಿಪಿ) ನ್ಯಾಯಾಧೀಶರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಮುಂದೂಡಿಕೆ ಮಾಡಿ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶವನ್ನು ನೀಡಿದ್ದಾರೆ.

ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆ ಮಾಡಿದ್ದು, ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ, ವಿಳಂಬದ ಉದ್ದೇಶವಿಲ್ಲ. ನಾವು ವಾದ ಮಂಡಿಸಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ ಎಂದು ಕೋರ್ಟ್‌ ಮುಂದೆ ಕೋರಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನೀವು ಹಿರಿಯ ವಕೀಲರು ಇದ್ದೀರಿ, ವಿಳಂಬ ಮಾಡಬೇಡಿ ಎಂದು ಸೂಚಿಸಿದರು.

ಅದಕ್ಕೆ ಒಪ್ಪಿದ ಜಯ್ನಾ ಕೊಠಾರಿ, ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಯಾವುದೇ ಕಾರಣಕ್ಕೂ ಸೋಮವಾರ ‌ಸಮಯ ವ್ಯರ್ಥ ಮಾಡಲ್ಲ ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ವಾದ ಮಂಡಿಸಿದ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ನನ್ನ 56 ವರ್ಷಗಳ ವಕೀಲ ವೃತ್ತಿಯಲ್ಲಿ ತಪ್ಪು ಮಾಹಿತಿ ನೀಡಿಲ್ಲ. ಬೇಲ್ ಅರ್ಜಿ ಊರ್ಜಿತವಲ್ಲವೆಂದು ಎಸ್‌ಪಿಪಿ ವಾದ ಮಂಡಿಸಿದ್ದಾರೆ. ಇದು ಹೇಗೆ ಸಾಧ್ಯ? ಎಂದು ‘ಸುಪ್ರೀಂ’ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.

2023ರ ತೀಸ್ತಾ ಸೆಟಲ್ ವಾಡ್‌ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ ನಾಗೇಶ್‌, ಸೆಟಲ್ ವಾಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ನಿರಂಜನ್ ಸಿಂಗ್ ಕೇಸ್‌ನಲ್ಲಿಯೂ ಜಾಮೀನು ಉಲ್ಲೇಖವಿದೆ. 22 ತೀರ್ಪುಗಳಲ್ಲಿ ನಿರಂಜನ್ ಕೇಸ್‌ ಅನ್ನು ಅನುಸರಿಸಲಾಗಿದೆ. ಕಸ್ಟಡಿಯಲ್ಲಿದ್ದಾಗಲೂ ಜಾಮೀನು ನೀಡಿರುವ ಉಲ್ಲೇಖವಿದೆ. ಒಂದೊಂದು ದಿನ ಒಬ್ಬೊಬ್ಬರನ್ನು ಎಸ್‌ಪಿಪಿಯಾಗಿ ನೇಮಕ ಮಾಡಲಾಗುತ್ತಿದೆ. ಮೊದಲು ಜಗದೀಶ್ ಇದ್ದರು, ಈಗ ಜಯ್ನಾ ಕೊಠಾರಿ ಇದ್ದಾರೆ. ಎಸ್‌ಪಿಪಿ ನೇಮಕಕ್ಕೂ ಕಾನೂನಿನಲ್ಲಿ ಕೆಲ ಕ್ರಮಗಳಿವೆ ಎಂದು ವಾದಿಸಿದರು.

ಸಂತ್ರಸ್ತೆ ಎಲ್ಲಿದ್ದಾರೆ, ಸಂತ್ರಸ್ತೆಗೆ ಏನಾದರೂ ಗಾಯವಾಗಿದೆಯಾ? ಸಂತ್ರಸ್ತೆಯ ಪರಿಸ್ಥಿತಿಯ ಬಗ್ಗೆ ಎಸ್‌ಐಟಿ ಮಾತನಾಡುತ್ತಿಲ್ಲ. ಸಂತ್ರಸ್ತೆ ಪತ್ತೆಯಾಗದ ಕಾರಣ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿತ್ತು. ಮಹಿಳೆಯ ಸುರಕ್ಷತೆ ಸಂಬಂಧ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಲಾಗಿತ್ತು. 364(a), 365 ಅಡಿ ಕೇಸ್ ದಾಖಲಿಸುವ ಅಗತ್ಯವೇ ಇರಲಿಲ್ಲ ಎಂದು ವಕೀಲರಾದ ನಾಗೇಶ್‌ ಅವರು ಎಸ್‌ಐಟಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ವಿಮಾನ ಹೈಜಾಕ್ ಪ್ರಕರಣವನ್ನು ಉಲ್ಲೆಖಿಸಿದ ಅವರು, ಈ ಹಿಂದೆ ವಿಮಾನ ಹೈಜಾಕ್ ಮಾಡಿ ಉಗ್ರನ ಬಿಡುಗಡೆಗೆ ಕೋರಲಾಗಿತ್ತು. ವಿಮಾನ ಹೈಜಾಕ್ ಸಮಯದಲ್ಲಿ ಜಸ್ವಂತ್ ಸಿಂಗ್ ಮಂತ್ರಿ ಆಗಿದ್ದರು. ಆಗ ಉಗ್ರರನ್ನು ಬಿಟ್ಟು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಬಿಡಿಸಿದ್ದರು. ಇದಾದ ಬಳಿಕವೇ ಸೆಕ್ಷನ್ 364(a) ಸೇರಿಸಲಾಯಿತು. ಇಲ್ಲಿ ಇಂತಹ ಘಟನೆ ನಡೆದಿಲ್ಲವಾದರೂ ಸೆಕ್ಷನ್ 364(a) ಸೇರಿಸಲಾಗಿದೆ. ನಮ್ಮ ಕಕ್ಷಿದಾರ ರೇವಣ್ಣ ವಿರುದ್ಧ 364(a) ದಾಖಲು ಮಾಡಿದ್ದಾರೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯ 21 ವರ್ಷದ ಮಗ ದೂರು ನೀಡಿದ್ದಾನೆ ಎಂದು ವಾದ ಮಂಡಿಸಿದರು.

ಮಹಿಳೆಯನ್ನು ಅಪಹರಿಸಿ ವಿದೇಶಕ್ಕೆ ಕರೆದೊಯ್ದರೆ ಈ ಸೆಕ್ಷನ್‌ಗಳು ಅಪ್ಲೇ ಆಗುತ್ತವೆ. ಪ್ರಕರಣದಲ್ಲಿ ರೇವಣ್ಣ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ಸಾರಾಂಶ ಉಲ್ಲೇಖಿಸಿದ ನಾಗೇಶ್‌, ದೂರುದಾರ ಮಗನಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದಾರೆಂದು ಹೇಳಿದ್ದಾರೆ. ದೂರುದಾರನಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದರೆ ಆಕ್ಷೇಪಣೆ ಸಲ್ಲಿಸಬಹುದು. ದೂರಿನಲ್ಲಿ ಇರುವ ಸತೀಶ್ ಬಾಬು ಹೇಳಿಕೆಯನ್ನು ಗಮನಿಸೋಣ. ಅದರಲ್ಲಿ “ನಿನ್ನ ತಾಯಿ ಮೇಲೆ ಪೊಲೀಸ್ ಕೇಸ್ ಆಗುತ್ತದೆ. ರೇವಣ್ಣ ಕರೆದಿದ್ದಾರೆಂದು ಹೇಳಿ ಕರೆದುಕೊಂಡು ಹೋದರು” ಎಂದು ಆರೋಪ ಮಾಡಲಾಗಿದೆ. ಹಾಗಾದರೆ, ಸಿಎಂ ಹೇಳಿದ್ದಾರೆ ಎಂದು ಕರೆದೊಯ್ದರೆ ಸಿಎಂ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಲು ‌ಸಾಧ್ಯವೇ? ರೇವಣ್ಣ ಸಾಹೇಬರು ಹೇಳಿದ್ದಾರೆ ಎಂದು ಕರೆದೊಯ್ದರೆ ಅದು ಅಪಹರಣವೇ? ಇದರಲ್ಲಿ ಮೋಸವಿದೆಯೇ? ಬಲ ಪ್ರಯೋಗವಿದೆಯೇ? ಹೀಗಾಗಿ ಇಲ್ಲಿ ಅಪಹರಣದ ಯಾವುದೇ ಅಂಶಗಳು ಅನ್ವಯವಾಗುವುದಿಲ್ಲ ಎಂದು ವಾದ ಮಂಡಿಸಿದರು.

ಈ ಪ್ರಕರಣದಲ್ಲಿ ಅಪಹರಣಕ್ಕೊಳಗಾದವರೇ ಆಕ್ಷೇಪಣೆ ಸಲ್ಲಿಸಬೇಕು. ಬೇರೆ ಯಾರೂ ಆಕ್ಷೇಪಣೆ ಸಲ್ಲಿಸಲಾಗುವುದಿಲ್ಲ. 365 ಅಕ್ರಮ ಬಂಧನ‌ ಸೆಕ್ಷನ್ ಕೂಡ ಅನ್ವಯ ಆಗುವುದಿಲ್ಲ. ಇಲ್ಲಿ ಏನು ಡಿಮ್ಯಾಂಡ್ ಇದೆ? ಅಪಹರಣವೂ ಇಲ್ಲ,‌ ಅಕ್ರಮ ಬಂಧನವೂ ಇಲ್ಲ. ನಾಳೆ‌ ಯಾರಿಂದಲಾದರೂ ಹೇಳಿಕೆ ಪಡೆದು ಸಾಕ್ಷ್ಯ ಸೃಷ್ಟಿಸಬಹುದು. ಏಕೆಂದರೆ ಪೊಲೀಸರು ಹಲ್ಲಿಲ್ಲದ ಹಾವುಗಳು. ಪೊಲೀಸರಿಗೆ ಸೆಕ್ಷನ್ 161 ಹೇಳಿಕೆ ಎಂಬ ಅಸ್ತ್ರ ಇದೆ. ಇನ್ನು ಎಚ್.ಡಿ.ರೇವಣ್ಣ ರಾಜಕೀಯ ಪಕ್ಷದಲ್ಲಿದ್ದಾರೆ ಎಂದು ನಾಗೇಶ್‌ ವಾದಿಸಿದರು.

ಎಂದು ರಿಮ್ಯಾಂಡ್ ಅರ್ಜಿಯನ್ನು ವಕೀಲ ಸಿ.ವಿ.ನಾಗೇಶ್ ಓದಿ ಹೇಳಿದರು. ಪೊಲೀಸರು ನೀಡಿದ್ದ ಕಾರಣಗಳನ್ನು ಇದೇ ವೇಳೆ ಪ್ರಶ್ನಿಸಿದರು.

ಸಂತ್ರಸ್ತೆಯಿಂದ‌ 164 ಹೇಳಿಕೆ‌ ದಾಖಲಿಸಬೇಕಿದೆ ಎಂದು ಎಸ್ಐಟಿ ಹೇಳಿದೆ. ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ ಇಷ್ಟು ದಿನ ಏನು ಮಾಡುತ್ತಲಿದೆ? ಎಂದು ಪ್ರಶ್ನೆ ಮಾಡಿದರು.

ಈ ವೇಳೆ ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡಿಸಿ, ಎಚ್‌.ಡಿ. ರೇವಣ್ಣಗೆ ಜಾಮೀನು ನೀಡಲು ಎಸ್‌ಪಿಪಿಯಿಂದ ಆಕ್ಷೇಪವಿದೆ. ಸಂತ್ರಸ್ತೆ ಪುತ್ರನಿಗೆ ಮೊದಲು ಸಂತ್ರಸ್ತೆ ವಿಡಿಯೊ ಬಗ್ಗೆ ತಿಳಿಯುತ್ತದೆ. ಸಾಕಷ್ಟು ಮಹಿಳೆಯರೊಂದಿಗಿರುವ ಅಶ್ಲೀಲ ವಿಡಿಯೊಗಳೂ ಕಾಣುತ್ತದೆ. ಅದಾದ ಬಳಿಕ ‌ಮಹಿಳಾ ‌ಆಯೋಗಕ್ಕೆ ದೂರು ನೀಡುತ್ತಾರೆ. ಹೊಳೆನರಸೀಪುರ ಠಾಣೆಯಲ್ಲಿ ಒಂದು ‌ಪ್ರಕರಣ ದಾಖಲಾಗುತ್ತದೆ. ಬಳಿಕ ಸರ್ಕಾರದಿಂದ ಎಸ್‌ಐಟಿ ರಚನೆಯಾಗಿದೆ ಎಂದು ಇಡೀ ಪ್ರಕರಣದ ಟೈಂ ಲೈನ್‌ ಅನ್ನು ಹೇಳಿದರು.

ಸಂತ್ರಸ್ತೆ ಆರೋಪಿ ಮನೆಯಲ್ಲಿ 6 ವರ್ಷದಿಂದ ಕೆಲಸ ಮಾಡುತ್ತಿದ್ದರು. ಏಪ್ರಿಲ್ 28ರ ರಾತ್ರಿ ಸಂತ್ರಸ್ತೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಅದಾದ ಬಳಿಕ ಆಕೆ ಪತ್ತೆಯಾಗಿರಲಿಲ್ಲ. ಸಂತ್ರಸ್ತೆ ಪುತ್ರ ಹಲವರಿಗೆ ಕರೆ ಮಾಡಿ ತಾಯಿ ಬಗ್ಗೆ ಮಾಹಿತಿ ಕೇಳಿದ್ದಾರೆ. ಬಳಿಕ‌ ತನ್ನ ತಾಯಿ‌ ‌ತೊಂದರೆಯಲ್ಲಿದ್ದಾಳೆಂದು ದೂರು ನೀಡಿದ್ದಾರೆ. ಅಶ್ಲೀಲ‌ ವಿಡಿಯೋಗಳಲ್ಲಿ ಸಂತ್ರಸ್ತೆ ಗುರುತು ಸಿಗುವಂತೆ ರೆಕಾರ್ಡ್ ಆಗಿದೆ. ಬಳಿಕ ತನಿಖೆ ಕೈಗೊಂಡ ಬಳಿಕ ಎಸ್‌ಐಟಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿದೆ. ಸಂತ್ರಸ್ತೆಯನ್ನು ಅಪಹರಿಸಿ 40 ಕಿ.ಮೀ. ದೂರದಲ್ಲಿ ಕೂಡಿ ಹಾಕಲಾಗಿತ್ತು. ಸಂತ್ರಸ್ತೆಯನ್ನು ಕೂಡಿಹಾಕಿದ್ದ ಸ್ಥಳ ಆರೋಪಿ ಸಂಬಂಧಿಗೆ ಸೇರಿದ್ದಾಗಿದೆ. ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತೆಯ ಅಶ್ಲೀಲ ವಿಡಿಯೊ ಇದೆ ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.

ಸಿಆರ್‌ಪಿಸಿ 161 ಅಡಿ ಹೇಳಿಕೆ ದಾಖಲಿಸಲಾಗಿದೆ. ಸಾಕ್ಷಿಗಳ ಹೇಳಿಕೆಯಲ್ಲೂ ರೇವಣ್ಣ ಹೆಸರು ಉಲ್ಲೇಖವಾಗಿದೆ. ಇದು ಸ್ಪಷ್ಟವಾಗಿ ಕಿಡ್ನ್ಯಾಪ್, ಒತ್ತೆಯಾಳಾಗಿಟ್ಟುಕೊಂಡ ಪ್ರಕರಣವಾಗಿದೆ. ಸಂತ್ರಸ್ತೆಯ ಪುತ್ರ ನೀಡಿರುವ ದೂರಿನಲ್ಲಿ ಹೇಳಿರೋದು ಸತ್ಯ. ಎಚ್.ಡಿ.ರೇವಣ್ಣ ವಿರುದ್ಧ ಸೆಕ್ಷನ್ 364(a) ಅನ್ವಯವಾಗುತ್ತದೆ. 364(a) ಅಡಿಯಲ್ಲಿ ದಾಖಲಾಗಿರೋ ಕೆಲ‌ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಹೀಗಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದ ತೀವ್ರತೆಯೂ ಜಾಸ್ತಿ ಇದೆ. ಆರೋಪಿಯ ತಪ್ಪು ಕಂಡುಬಂದಾಗ ಬಹುತೇಕ ಈ ಸೆಕ್ಷನ್‌ಗಳನ್ನೇ ಹಾಕಲಾಗುತ್ತದೆ ಎಂದು ಹೇಳಿದರು.

ಆರೋಪಿಯ ಪುತ್ರ ಪ್ರಜ್ವಲ್‌ ರೇವಣ್ಣ ನಾಪತ್ತೆಯಾಗಿದ್ದಾರೆ. ಆರೋಪಿ ಪುತ್ರನ ಪತ್ತೆಗೆ ಬ್ಲೂಕಾರ್ನರ್ ನೋಟಿಸ್ ನೀಡಲಾಗಿದೆ. ಆದರೂ ಇಲ್ಲಿಯವರೆಗೆ ಆರೋಪಿ ಪುತ್ರ ಎಲ್ಲಿದ್ದಾರೆಂದು ಪತ್ತೆಯಾಗಿಲ್ಲ. ಈವರೆಗೆ ವಾಪಸ್ ಕೂಡ ಬಂದಿಲ್ಲ. ಈ ಆರೋಪಿಯೂ ನಾಪತ್ತೆಯಾದರೆ ಏನು ಮಾಡುವುದು? ಅದಲ್ಲದೆ, ಆರೋಪಿ‌ ರೇವಣ್ಣ ತುಂಬಾನೇ ಪ್ರಭಾವಿಯಾಗಿದ್ದಾರೆ. ಈ ಹಂತದಲ್ಲಿ ಜಾಮೀನು ನೀಡಿದ್ರೆ ಸಾಕ್ಷ್ಯ ಹಾಳು‌ ಮಾಡುತ್ತಾರೆ. ಜಾಮೀನು‌ ನೀಡಿದರೆ ಸಂತ್ರಸ್ತೆ ಜೀವಕ್ಕೆ ಯಾರು ಗ್ಯಾರಂಟಿ ನೀಡ್ತಾರೆ? ಜಾಮೀನು ಪಡೆದು ಬೇರೆ ಮಹಿಳೆಯರನ್ನು ಕಿಡ್ನ್ಯಾಪ್‌ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ತನ್ನ ತಾಯಿಯನ್ನು ಕಾಪಾಡುವಂತೆ ಸಂತ್ರಸ್ತೆ ಮಗ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ನೀಡಬಾರದು. ಎಚ್.ಡಿ.ರೇವಣ್ಣ ವಿರುದ್ದ ಎರುಡು ಎಫ್ಐಆರ್ ದಾಖಲಾಗಿವೆ. ರೇವಣ್ಣ ವಿರುದ್ಧ ಲೈಂಗಿಕ‌ ದೌರ್ಜನ್ಯವೆಸಗಿರುವ ಆರೋಪವೂ ಇದೆ. ಲೈಂಗಿಕ‌ ದೌರ್ಜನ್ಯವೆಸಗುವ ಆರೋಪಿಗಳಿಗೆ ಸಂದೇಶ ರವಾನೆಯಾಗಬೇಕು. ಹೀಗಾಗಿ ಆರೋಪಿಗೆ ಜಾಮೀನು ನೀಡಬಾರದು. ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಹೀಗಾಗಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಎಂದು ಮನವಿ ಮಾಡಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರ ವರದಿ ಸಲ್ಲಿಸಲು ಸೂಚಿಸಿದ್ದಲ್ಲದೆ, ಮತ್ತೆ ಸಮಯ ವ್ಯರ್ಥ ಮಾಡದಂತೆ ಸೂಚಿಸಿ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದರು.

Latest Indian news

Popular Stories