ದೇಶದಲ್ಲಿಂದು ಬಿಜೆಪಿ, RSS ಸೃಷ್ಟಿಸಿರುವ ನಕಲಿ ಹಿಂದುತ್ವ ವಿಜೃಂಭಿಸುತ್ತಿದೆ | ರಾಹುಲ್ ಗಾಂಧಿ

“ನಾನು ಓದಿದ ಭಗವದ್ಗೀತೆ, ಉಪನಿಷತ್‌ ಅಥವಾ ಹಿಂದೂ ಧರ್ಮದ ಯಾವುದೇ ಪುರಾಣಗಳಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹೇಳುವ ಹಿಂದುತ್ವ ಇಲ್ಲವೇ ಇಲ್ಲ”

ಹೊಸದಿಲ್ಲಿ: ಸನಾತನ ಧರ್ಮದ ವಿಚಾರವಾಗಿ INDIA ಮೈತ್ರಿಕೂಟದ ಡಿಎಂಕೆ ಪಕ್ಷದ ಮುಖಂಡ ಉದಯನಿಧಿ ಸ್ಟಾಲಿನ್ ಅವರ ವಿವಾದಾತ್ಮಕ ಹೇಳಿಕೆ ಬಳಿಕ ಇದೀಗ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹಿಂದುತ್ವದ ವಿಚಾರವಾಗಿ ನೀಡಿರುವ ಹೇಳಿಕೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಇಂದು ಹುಸಿ ಹಿಂದುತ್ವವಾದ ತುಂಬಿಕೊಂಡಿದೆ ಎಂಬ ಅವರ ಹೇಳಿಕೆಗೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ರಾಹುಲ್‌ ಗಾಂಧಿ ತಮ್ಮ ವಿದೇಶಿ ಪ್ರವಾಸದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್‌ ಗುರಿಯಾಗಿಸಿಕೊಂಡು ವಾಗ್ದಾಳಿ ಮುಂದುವರಿಸಿದ್ದಾರೆ. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಸೈನ್ಸ್‌ ಪಿಒ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶೈಕ್ಷಣಿಕ ತಜ್ಞರ ಜತೆ ನಡೆದ ಸಂವಾದದಲ್ಲಿ ಮಾತನಾಡಿದ ರಾಹುಲ್‌, ”ಅಧಿಕಾರಕ್ಕಾಗಿ ಬಿಜೆಪಿ ಸೃಷ್ಟಿಸಿರುವ ನಕಲಿ ಹಿಂದುತ್ವ ದೇಶದಲ್ಲಿ ವಿಜೃಂಭಿಸುತ್ತಿದೆ. ದೇಶದಲ್ಲಿ ಇಂದು ಹುಸಿ ಹಿಂದುತ್ವವಾದ ತುಂಬಿಕೊಂಡಿದೆ ” ಎಂದು ವಾಗ್ದಾಳಿ ನಡೆಸಿದರು.

”ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಪ್ರತಿಪಾದಿಸುವ ಹಿಂದುತ್ವ ಎಂಬುದು ಎಲ್ಲಿಯೂ ಇಲ್ಲ. ಅವರು ಮಾಡುತ್ತಿರುವುದಕ್ಕೂ, ಹಿಂದುತ್ವಕ್ಕೂ ಸಂಬಂಧವಿಲ್ಲ. ನಾನು ಓದಿದ ಭಗವದ್ಗೀತೆ, ಉಪನಿಷತ್‌ ಅಥವಾ ಹಿಂದೂ ಧರ್ಮದ ಯಾವುದೇ ಪುರಾಣಗಳಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹೇಳುವ ಹಿಂದುತ್ವ ಇಲ್ಲವೇ ಇಲ್ಲ. ಹಿಂದೂ ರಾಷ್ಟ್ರೀಯತೆ, ಹಿಂದುತ್ವ ವಿಚಾರವನ್ನು ಬಿಜೆಪಿ ತಪ್ಪಾಗಿ ಬಿಂಬಿಸಿದೆ, ದುರ್ಬಳಕೆ ಮಾಡಿಕೊಳ್ಳುತ್ತಿದೆ,” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

Latest Indian news

Popular Stories