ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ | ನನ್ನ ಇಡೀ ರಾಜಕಾರಣ ಕೋಮುವಾದ ಶಕ್ತಿಗಳ ವಿರುದ್ಧವೇ ನಡೆದಿದೆ – ಸಿದ್ದರಾಮಯ್ಯ ಖಡಕ್ ಉತ್ತರ

ಮೈಸೂರು: ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.

ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ. ಈ ಹಿಂದೆ ತಾವು ಬಿಜೆಪಿಗೆ ಹೋಗುವ ಪ್ರಯತ್ನ ಮಾಡಿದ್ದರು ಎಂಬ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸಿಎಂ, ನಾನು ಬಿಜೆಪಿಗೆ ಹೋಗುತ್ತೇನೆ ಅಂದ್ರೆ ಯಾರಾದರೂ ನಂಬುತ್ತಾರಾ..? ಅಡ್ವಾಣಿ ಅವರನ್ನು ಯಾವುದೋ ಸಂದರ್ಭದಲ್ಲಿ ಭೇಟಿ ಮಾಡಿದೆ ಎಂದ ತಕ್ಷಣ ಬಿಜೆಪಿಗೆ ಸೇರಲು ಹೋಗಿದ್ದೆ ಎಂದೆಲ್ಲಾ ಹೇಳುವುದು ಸರಿಯಲ್ಲ. ಮೊನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ, ಹಾಗೆಂದು ಬಿಜೆಪಿ ಜತೆ ಸೇರುತ್ತೇನೆಯೇ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಯಾರೋ ಹೇಳಿದರು ಎಂದು ಏನನ್ನೋ ಹೇಳಿದ್ದಾರೆ. ನನ್ನ ರಾಜಕೀಯ ಜೀವನದುದ್ದಕ್ಕೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ ನಾನು ಎಂದೂ ಕೋಮುವಾದಿ ಪಕ್ಷದ ಜತೆ ಹೋಗುವುದಿಲ್ಲ. ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ. ನನ್ನ ಇಡೀ ರಾಜಕಾರಣ ಕೋಮುವಾದ ಶಕ್ತಿಗಳ ವಿರುದ್ಧವೇ ನಡೆದಿದೆ ಎಂದರು.

ಕಾವೇರಿ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಸರ್ವ ಪಕ್ಷಗಳ ಸಭೆಯಲ್ಲಿ ರಾಜಕಾರಣ ಮಾಡಲ್ಲ ಎಂದು ಹೇಳಿದವರು ಈಗ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿ, ಬಿಜೆಪಿಯವರಿಗೆ ತಾಕತ್ತಿದ್ದರೆ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸಲಿ ಎಂದು ಸವಾಲು ಹಾಕಿದರು.

Latest Indian news

Popular Stories