ರಾಜ್ಯದ 20 ಲೋಕಸಭಾ ಕ್ಷೇತ್ರ ಗೆಲ್ಲುವುದು ಕಾಂಗ್ರೆಸ್ ಗುರಿ, ರಾಹುಲ್ ಗಾಂಧಿ ಮುಂದಿನ ಪ್ರಧಾನಿ: ಸಲೀಂ ಅಹ್ಮದ್ 

ಮಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆಯಾಗಿ, ಸಂಭಾವ್ಯ ಅಭ್ಯರ್ಥಿಗಳ ಕುರಿತು ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲು ಎಐಸಿಸಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಕರ್ನಾಟಕದ ಒಬ್ಬ ಸಚಿವರು ಮತ್ತು ಪಕ್ಷದ ಹಿರಿಯ ಮುಖಂಡರನ್ನು ಪಕ್ಷದ ವೀಕ್ಷಕರನ್ನಾಗಿ ನೇಮಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸೇರಿದಂತೆ 20 ಸ್ಥಾನ ಗೆಲ್ಲುವುದು ಕಾಂಗ್ರೆಸ್ ಗುರಿಯಾಗಿದೆ ಎಂದು ಹೇಳಿದರು.

‘ಚುನಾವಣೆಗೆ ಕನಿಷ್ಠ ಆರು ತಿಂಗಳ ಮೊದಲು ಅಭ್ಯರ್ಥಿಗಳನ್ನು ಘೋಷಿಸುವಂತೆ ಮನವಿ ಮಾಡಿದ್ದೇವೆ. ನಾವು ಕೂಡ ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರತಿ ಕ್ಷೇತ್ರಕ್ಕೆ ಪಕ್ಷದ ವೀಕ್ಷಕರ ಪಟ್ಟಿಯನ್ನು ಎಐಸಿಸಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ’ ಎಂದು ಹೇಳಿದರು.

ಈ ಭಾರಿ I.N.D.I.A ಅಧಿಕಾರಕ್ಕೆ ಬರುತ್ತದೆ ಮತ್ತು ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಖಾತೆಗಳಿಗೆ 15 ಲಕ್ಷ ರೂಪಾಯಿ ಜಮೆ ಮಾಡುವಲ್ಲಿ, ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ  ದ್ವಿಗುಣಗೊಳಿಸುವುದು ಮತ್ತು ಮುಂದಿನ ಆರು ತಿಂಗಳಿಗೆ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಬೆಲೆ ಇಳಿಕೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ವಿಫಲವಾಗಿದೆ. ಈ ವಿಚಾರಗಳನ್ನ ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಲುಪಿಸಲಿದ್ದಾರೆ’ ಎಂದರು. 

‘ಪಕ್ಷವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ವಿಶೇಷ ಒತ್ತು ನೀಡುವುದರಿಂದ ಎರಡೂ ಜಿಲ್ಲೆಗಳಲ್ಲಿ ಚುನಾವಣೆ ಎದುರಿಸಲು ನಮ್ಮ ಕಾರ್ಯತಂತ್ರಗಳೂ ಬದಲಾಗಿರುತ್ತವೆ. ಪಕ್ಷವನ್ನು ಮತ್ತಷ್ಟು ಬಲಪಡಿಸಲು ಬೂತ್ ಮಟ್ಟದಲ್ಲಿಯೂ ಸಂಘಟನೆ ಮಾಡುತ್ತೇವೆ. ಜನರು ಬದಲಾವಣೆಯನ್ನು ಬಯಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರ ಬೇಟೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಆಪರೇಷನ್ ಕಮಲದಂತಹ ಕಾರ್ಯಾಚರಣೆಯಲ್ಲಿ ತೊಡಗುವುದಿಲ್ಲ. ಪಕ್ಷವು 136 ಶಾಸಕರನ್ನು ಹೊಂದುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಮುಂದಿನ ಐದು ವರ್ಷಗಳ ಕಾಲ ಕರ್ನಾಟಕದ್ಲಿ ಪ್ರಬಲ ಮತ್ತು ಸ್ಥಿರ ಸರ್ಕಾರವನ್ನು ನೀಡುತ್ತದೆ. ಬಿಜೆಪಿ ಮತ್ತು ಜೆಡಿಎಸ್‌ನಿಂದ ಹಲವು ನಾಯಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಪಕ್ಷಕ್ಕೆ ಸೇರಲು ಅವಕಾಶ ನೀಡುವ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಹೇಳಿದರು.

‘ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ಕಾಯುತ್ತಿದೆ. ಬಿಜೆಪಿಯವರು ಕೇವಲ ನಮ್ಮ ಸರ್ಕಾರದ ಖಾತರಿಗಳನ್ನು ಟೀಕಿಸುವುದರಲ್ಲಿ ನಿರತರಾಗಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ 90 ದಿನಗಳಲ್ಲಿ ಕಾಂಗ್ರೆಸ್ ನಾಲ್ಕು ಖಾತರಿ ಯೋಜನೆಗಳನ್ನು ಜಾರಿಗೆ ತಂದಿದೆ. ಯುವ ನಿಧಿ ಡಿಸೆಂಬರ್‌ನಲ್ಲಿ ಜಾರಿಗೆ ಬರಲಿದೆ. ನಮ್ಮ ಖಾತ್ರಿ ಯೋಜನೆಗಳಿಂದ ಬಿಜೆಪಿಗೆ ಭಯ ಶುರುವಾಗಿದೆ’ ಎಂದರು.

ಇದಲ್ಲದೆ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ನೇಮಿಸುವಲ್ಲಿ ಬಿಜೆಪಿ ವಿಫಲವಾಗಿದೆ. ರಾಜಕೀಯ ಸನ್ನಿವೇಶದಲ್ಲಿ ವಿರೋಧ ಪಕ್ಷವು ಸದ್ಯದ ಸರ್ಕಾರದ ನ್ಯೂನತೆಗಳು ಮತ್ತು ಅಸಮರ್ಪಕತೆಗಳ ಬಗ್ಗೆ ಗಮನ ಸೆಳೆಯುವ ಸಾಂಕೇತಿಕ ‘ಶಾಡೋ ಕ್ಯಾಬಿನೆಟ್’ ಆಗಿ ಕಾರ್ಯನಿರ್ವಹಿಸಬೇಕು. ಆದರೆ, ಪ್ರತಿಪಕ್ಷ ಬಿಜೆಪಿ ಬೇರೆ ಕೆಲಸದಲ್ಲೇ ನಿರತವಾಗಿದೆ. ಜನರು ಅವರ ಕೃತ್ಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.

Latest Indian news

Popular Stories