ಬೆಂಗಳೂರು: ಜವಳಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಉದ್ಯಮಶೀಲರ ಕಡತಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡಿ, ಸಬ್ಸಿಡಿ ಮತ್ತಿತರ ಕಾರಣಗಳಿಗೆ ರೂಪಿತವಾದ ಕಡತಗಳ ಬಗ್ಗೆ ಮುತುವರ್ಜಿ ವಹಿಸಿ ಎಂದು ಜವಳಿ ಸಚಿವ ಶಿವಾನಂದ ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿಕಾಸಸೌಧದಲ್ಲಿ ಜವಳಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಡತ ವಿಲೇವಾರಿ ವಿಳಂಬವಾದರೆ ಉದ್ಯಮಶೀಲರು ಆಸಕ್ತಿ ಕಳೆದುಕೊಳ್ಳಬಹುದು. ಹೀಗಾಗಿ ನೈಜ ಯೋಜನೆಗಳ ಕಡತಗಳನ್ನು ವಿಳಂಬವಿಲ್ಲದೆ ವಿಲೇ ಮಾಡಿ ಹಾಗೂ ಒಪ್ಪಂದದ ಪ್ರಕಾರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದು ಹೇಳಿದರು.
ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಉತ್ಪಾದನಾ ವೆಚ್ಚ ಅಧಿಕವಾಗಿರುವುದರಿಂದ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೇಡಿಕೆ ಇಲ್ಲ. ಹೀಗಾಗಿ ಉತ್ಪಾದನಾ ವೆಚ್ಚ ಕಡಿತ ಮಾಡಲೂ ಆಧುನೀಕರಣ ಸೇರಿದಂತೆ ಇತರ ಮಾರ್ಗೋಪಾಯಗಳ ಕ್ರಿಯಾ ಯೋಜನೆ ತಯಾರಿಸಿ ಕೊಡಿ. ಜವಳಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಿ ಅವಕಾಶಗಳಿವೆ ಎಂಬ ಮಾಹಿತಿಯೂ ಬೇಕು. ಸಭೆಗೆ ಬರುವಾಗ ಪೂರ್ಣ ಮಾಹಿತಿ ಇರಬೇಕು. ಹೋಮ್ ವರ್ಕ್ ಮಾಡಿಕೊಂಡು ಬರಬೇಕು ಎಂದು ಹೇಳಿದರು.
ಜವಳಿ ಪಾರ್ಕ್ ಗಳ ಸ್ಥಿತಿಗತಿ, ಪವರ್ ಲೂಮ್, ಹ್ಯಾಂಡ್ಲೂಮ್ಗಳು ಎಷ್ಟಿವೆ. ಯಾವ ಯಾವ ಯೋಜನೆಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂಬ ವಿವರ ಒದಗಿಸಿ ಎಂದು ಸೂಚಿಸಿದರು. ಇಂದಿನ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಅನುಷ್ಠಾನ ಎಷ್ಟರಮಟ್ಟಿಗೆ ಕಾರ್ಯ ರೂಪಕ್ಕೆ ಬಂದಿದೆ ಎಂಬುದು ಮುಂದಿನ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಹೇಳಿದರು.
ಬಹುತೇಕ ಅಧಿಕಾರಿಗಳಿಗೆ ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಏನು ಚಟುವಟಿಕೆ ನಡೆಯುತ್ತಿವೆ ಎಂಬ ಮಾಹಿತಿ ಇಲ್ಲ. ಇದನ್ನು ಗಮನಿಸಿದರೆ ನೀವು ಎಷ್ಟು ಜವಾಬ್ದಾರಿಯಿಂದ ಕೆಲಸ ಮಾಡುತ್ತೀರಿ ಎಂಬುದು ವ್ಯಕ್ತವಾಗುತ್ತದೆ. ಕಚೇರಿಯಲ್ಲಿ ಕುಳಿತುಕೊಳ್ಳದೆ ಪ್ರಾಜೆಕ್ಟ್ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಸೂಚಿಸಿದರು.
ವಿಭಾಗಾವಾರು ಜವಳಿ ಕ್ಷೇತ್ರದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಎಲ್ಲ ಅಧಿಕಾರಿಗಳು ನಿಮ್ಮ ನಿಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜವಳಿ ಕ್ಷೇತ್ರದ ಚಟುವಟಿಕೆಗಳು ಹಾಗೂ ಸಾಧ್ಯತೆಗಳ ಬಗ್ಗೆ ಸವಿವರವಾದ ವರದಿಯೊಂದಿಗೆ ಮುಂದಿನ ಸಭೆಗೆ ಬರಬೇಕು ಎಂದು ಸೂಚಿಸಿದರು.
ಕಲಬುರಗಿ ಪಿಎಂ ಮಿತ್ರ ಟೆಕ್ಸ್ ಟೈಲ್ ಪಾರ್ಕ್, ಚಿತ್ರದುರ್ಗ ಜಿಲ್ಲೆಯ ಬೈನರಿ ಅಪರೆಲ್ ಪಾರ್ಕ್, ಕೊಂಡ್ಲಹಳ್ಳಿ ಟೆಕ್ಸ್ ಟೈಲ್ ಪಾರ್ಕ್, ಬೆಳಗಾವಿ ಜಿಲ್ಲೆಯ ಕುರ್ನೆ ಅಪರೆಲ್ ಪಾರ್ಕ್, ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ಟೆಕ್ಸ್ ಟೈಲ್ ಪಾರ್ಕ್ಗಳ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಯಿತು.
ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಜವಳಿ ನೀತಿ ಹೆಚ್ಚು ಪರಿಣಾಮಕಾರಿಯಾಗಿದೆ. ಆದರೆ ಅಧಿಕಾರಿಗಳು ನಿರೀಕ್ಷಿತಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಇಲಾಖೆ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ ಬೇಸರ ವ್ಯಕ್ತಪಡಿಸಿದರು. ಕೇವಲ ಸಬ್ಸಿಡಿ ಕೊಡುವುದಕ್ಕೆ ಸೀಮಿತವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸಬ್ಸಿಡಿ ಕೊಡುವುದಷ್ಟೇ ನಿಮ್ಮ ಕೆಲಸ ಅಲ್ಲ ಎಂದರು. ಆಯುಕ್ತ, ಶ್ರೀಧರ ಸಭೆಯಲ್ಲಿದ್ದರು.
ಸೂರತ್ ಮಾದರಿ ಮಾರುಕಟ್ಟೆಗೆ ಸಲಹೆ : ದೊಡ್ಡಬಳ್ಳಾಪುರದಲ್ಲಿ ಸೂರತ್ ಮಾದರಿಯಲ್ಲಿ ಮಾರುಕಟ್ಟೆ ನಿರ್ಮಾಣದ ಬಗ್ಗೆ ಚರ್ಚೆ ನಡೆಯಿತು. ದೊಡ್ಡ ಪ್ರಮಾಣದಲ್ಲಿ ಸೀರೆ ಉತ್ಪಾದನೆಯಾಗುತ್ತಿದೆ. ಆದರೆ ಸೂರತ್ನಲ್ಲಿ ಈಗ ಬೇಡಿಕೆ ಕಡಿಮೆಯಾಗಿದೆ. ಸ್ಥಳೀಯವಾಗಿ ಇದೇ ಗುಣಮಟ್ಟದ ಸೀರೆಗಳು ಕಡಿಮೆ ದರದಲ್ಲಿ ಉತ್ಪಾದನೆಯಾಗುತ್ತಿವೆ. ಹೀಗಾಗಿ ಅಲ್ಲಿ ಚಿಕ್ಕಬಳ್ಳಾಪುರದ ಸೀರೆಗಳ ಬೇಡಿಕೆ ಕುಸಿದಿದೆ. ಸ್ಥಳೀಯವಾಗಿ ಮಾರುಕಟ್ಟೆ ಕಂಡುಕೊಳ್ಳಲು ಸೂರತ್ ಮಾದರಿಯಲ್ಲೇ ಮಾರುಕಟ್ಟೆ ನಿರ್ಮಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದರು.
ಸಭೆಯಲ್ಲಿ ಕಾರ್ಯದರ್ಶಿ ರಿಚರ್ಡ್ ವಿನ್ಸೆಂಟ್ ಡಿಸೋಜಾ, ಆಯುಕ್ತ ಶ್ರೀಧರ ಉಪಸ್ಥಿತರಿದ್ದರು.