ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಇರಲಿಲ್ಲ: ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯ

ಮಂಗಳೂರು: ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಇರಲಿಲ್ಲ. ಮೋದಿಯವರು ಇದುವರೆಗೂ ಹೇಳಿದ್ದರಲ್ಲಿ ಯಾವುದನ್ನಾದರೂ ಈಡೇರಿಸಿದ್ದಾರಾ? ಜನರ ಬದುಕಿಗೆ ನೆರವಾಗು, ದೇಶದ ಮಕ್ಕಳು-ಯುವಜನರ ಬದುಕು-ಭವಿಷ್ಯಕ್ಕೆ ಅನುಕೂಲ ಆಗುವ ಒಂದೇ ಒಂದನ್ನಾದರೂ ಈಡೇರಿಸಿದ್ದಾರಾ? ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಮಂಗಳೂರಿನ ಅಡ್ಯಾರ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಕ್ಷಿಣಕನ್ನಡದ ಜನತೆಗೆ ರಾಜಕೀಯ ಪ್ರಜ್ಞಾವಂತಿಕೆ ಹೆಚ್ಚಾಗಿದೆ. ಸತ್ಯ ಹೇಳುವವರು ಮತ್ತು ಸುಳ್ಳು ಹೇಳುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಪ್ರಜ್ಞಾವಂತಿಕೆಯೂ ಇದೆ. ಈ ಕಾರಣಕ್ಕೆ ಮಂಗಳೂರಿನಲ್ಲೇ ಮೊದಲ ಸಭೆ ಮಾಡುವ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದರು.‌

ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಕಿತ್ತಾಟ, ಜಗಳ ತಂದಿಟ್ಟಿರುವುದು ಬಿಟ್ಟರೆ ಜನ ಸಾಮಾನ್ಯರ ಬದುಕಿಗೆ ಅನುಕೂಲ ಆಗುವ ಒಂದೇ ಒಂದು ಕಾರ್ಯಕ್ರಮವನ್ನು ಕಳೆದ ಹತ್ತು ವರ್ಷಗಳಲ್ಲಿ ಜಾರಿ ಆಗಿದೆಯಾ? ಡೀಸೆಲ್-ಪೆಟ್ರೋಲ್ ಬೆಲೆ ಕಡಿಮೆ ಆಯ್ತಾ? ಅಡುಗೆ ಗ್ಯಾಸ್ ಬೆಲೆ ಕಡಿಮೆ ಆಗಿದೆಯಾ? ಕಪ್ಪು ಹಣ ವಾಪಾಸ್ ಬಂದಿದೆಯಾ? ಅಚ್ಛೆ ದಿನ್ ಯಾರಿಗಾದರೂ ಬಂದಿದೆಯಾ? ಹೇಳಿ ಎಂದು ನೆರೆದಿದ್ದ ಜನಸ್ತೋಮಕ್ಕೆ ಮುಖ್ಯಮಂತ್ರಿಗಳು ಕೇಳಿದರು. ಜನರು ಇಲ್ಲ, ಇಲ್ಲ, ಏನಿಲ್ಲ ಎಂದು ಕೂಗಿದರು.

2013-18 ರ ವರೆಗೂ ನಾವು ಕೊಟ್ಟ ಭರವಸೆಗಳಲ್ಲಿ ಶೇ98 ರಷ್ಟನ್ನು ಈಡೇರಿಸಿದೆವು. ಈ ಬಾರಿ ಚುನಾವಣೆ ವೇಳೆ 5 ಗ್ಯಾರಂಟಿಗಳ ಜತೆಗೆ ಹಲವು ಭರವಸೆ ನೀಡಿದ್ದೆವು. ಕೇವಲ 8 ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡಿ ಇಡೀ ದೇಶಕ್ಕೆ ಕರ್ನಾಟಕ ಮಾದರಿ ಅಭಿವೃದ್ಧಿಯನ್ನು ಕೊಟ್ಟಿದ್ದೇವೆ. ನಾವು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದೆವು.

ನಮ್ಮ ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದ 155 ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಿದರು. ಬಿಜೆಪಿ ತನ್ನ ಇತಿಹಾಸದಲ್ಲಾಗಲೀ, ವರ್ತಮಾನದಲ್ಲಾಗಲೀ ಇಷ್ಟೊಂದು ಜನೋಪಯೋಗಿ ಕೆಲಸ ಮಾಡಿದ್ದರೆ ಒಂದೇ ಒಂದು ಉದಾಹರಣೆ ಕೊಡಿ ಎಂದು ಮುಖ್ಯಮಂತ್ರಿಗಳು ಜನರಿಗೆ ಕೇಳಿದರು. ಜನರು ಇಲ್ಲಾ ಇಲ್ಲಾ ಏನಿಲ್ಲ, ಯಾವುದೂ ಇಲ್ಲ ಎಂದು ಕೂಗಿದರು.

ಅದೇ ರೀತಿ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳಲ್ಲೂ ಕೋಟಿ ಕೋಟಿ ಮಹಿಳೆಯರು ಗ್ಯಾರಂಟಿಗಳ ಲಾಭವನ್ನು ಪ್ರತೀ ತಿಂಗಳು ಪಡೆಯುತ್ತಿದ್ದಾರೆ. ನಿಮಗೆಲ್ಲಾ ಈ ಯೋಜನೆಯ ಅನುಕೂಲ ಸಿಗುತ್ತಿದೆಯಾ ಎಂದು ಮುಖ್ಯಮಂತ್ರಿಗಳು ಕೇಳಿದ್ದಕ್ಕೆ ಸಿಗುತ್ತಿದೆ , ಸಿಗುತ್ತಿದೆ ಎಂದು ಕೂಗಿ ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ ಜಯಕಾರ ಹಾಕಿದರು.

ಬಡವರು, ಮಧ್ಯಮ ವರ್ಗದವರಿಗೆ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ ಬಳಿಕವೂ ರಾಜ್ಯದ ಆರ್ಥಿಕತೆಯನ್ನು ಸದೃಡವಾಗಿ ಪ್ರಗತಿ ಪಥದಲ್ಲಿ ಮುನ್ನಡೆಸುತ್ತಿದ್ದೇವೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.

ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿಬಿಡುತ್ತದೆ ಎಂದಿದ್ದ ಮೋದಿಯವರೇ ಈಗ ನಮ್ಮ ಗ್ಯಾರಂಟಿಯನ್ನು ಕದ್ದು ಈಗ “ಮೋದಿ ಗ್ಯಾರಂಟಿ-ಮೋದಿ ಗ್ಯಾರಂಟಿ” ಎಂದು ಭಜನೆ ಆರಂಭಿಸಿದ್ದಾರೆ ಎಂದು ಸಿಎಂ ವ್ಯಂಗ್ಯವಾಡಿದರು.

AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, KPCC ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, AICC ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸಚಿವರುಗಳಾದ ಕೆ.ಜೆ.ಜಾರ್ಜ್, ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಕೆ.ವೆಂಕಟೇಶ್, ನಾಗೇಂದ್ರ, ಬೈರತಿ ಸುರೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಮುಖ್ಯಮಂತ್ರಿ ವೀರಪ್ಪಮೋಯ್ಲಿ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಮೋಟಮ್ಮ, ಆರ್.ವಿ.ದೇಶಪಾಂಡೆ, ಕಿಮ್ಮನೆ ರತ್ನಾಕರ್, ರಮಾನಾಥ ರೈ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಬಂಡಾರಿ, ಕೆಪಿಸಿಸಿ ಸಂವಹನ ವಿಭಾಗದ ಲಾವಣ್ಯ ಬಲ್ಲಾಳ್ ಸೇರಿ ಹಲವು ಮುಖಂಡರು ವೇದಿಕೆಯಲ್ಲಿದ್ದರು.

Latest Indian news

Popular Stories