ತುಮಕೂರು: ದೇವೇಗೌಡರ ಭಾಷಣದ ವೇಳೆ ವೇದಿಕೆಗೆ ನುಗ್ಗಿದ ಮಹಿಳೆಯರು; ಕುಮಾರಸ್ವಾಮಿ ವಿರುದ್ಧ ಘೋಷಣೆ

ತುಮಕೂರು: ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮಾತನಾಡುತ್ತಿದ್ದ ವೇಳೆ ವೇದಿಕೆಗೆ ನುಗ್ಗಿದ ಇಬ್ಬರು ಮಹಿಳೆಯರು ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಇಬ್ಬರು ಮಹಿಳೆಯರು ಕಾಂಗ್ರೆಸ್ ಕಾರ್ಯಕರ್ತೆಯರು ಎಂದು ಶಂಕಿಸಲಾಗಿದೆ. ಕೆಲವು ನಾಯಕರು ಮಾತನಾಡುವವರೆಗೂ ಕಾದು ದೇವೇಗೌಡರು ಭಾಷಣ ಮಾಡುವ ಸರದಿ ಬಂದಾಗ ಘೋಷಣೆಗಳನ್ನು ಕೂಗಿದರು.

ಬಿಜೆಪಿ ಮಹಿಳಾ ಕಾರ್ಯಕರ್ತರು ಅವರನ್ನು ಸಭಾಂಗಣದಿಂದ ಹೊರಕ್ಕೆ ಎಳೆದೊಯ್ದರು ಮತ್ತು ನಂತರ ಪೊಲೀಸರು ಅವರನ್ನು ದೂರ ಕಳುಹಿಸಿದರು. ಈ ಘಟನೆಯಿಂದ ತಬ್ಬಿಬ್ಬಾದ ದೇವೇಗೌಡರು ಕೆಲ ಕಾಲ ಭಾಷಣ ನಿಲ್ಲಿಸಿ ನಂತರ ಮಾತನಾಡಿದರು.

ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಸೋನಿಯಾ ಗಾಂಧಿ. ತುಮಕೂರಿನಿಂದ (2019ರಲ್ಲಿ) ಸ್ಪರ್ಧಿಸುವ ಇರಾದೆ ನನಗಿರಲಿಲ್ಲ, ಆದರೆ ಕಾಂಗ್ರೆಸ್ ನನ್ನನ್ನು ಇಲ್ಲಿಗೆ ತಂದು ಸೋಲಿಸಿತು. ಹಾಗಾಗಿ ರಾಜಕೀಯದಲ್ಲಿ ಯಾರನ್ನೂ ನಂಬುವುದಿಲ್ಲ ಎಂದು ಹೇಳಿದರು.

ಹಾಸನದಿಂದ ತುಮಕೂರಿಗೆ ಹೇಮಾವತಿ ನದಿ ನೀರು ಬಿಡುವುದಕ್ಕೆ ವಿರೋಧವಿದೆ ಎಂಬ ಅಪಪ್ರಚಾರಕ್ಕೆ ಬಲಿಯಾಗಿದ್ದೇನೆ ಎಂದು ಗೌಡರು ಹೇಳಿದರು. ಹತ್ತು ಲೋಕಸಭಾ ಕ್ಷೇತ್ರಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುತ್ತವೆ ಮತ್ತು ನಮ್ಮ ಅಭ್ಯರ್ಥಿಗಳು ಗೆದ್ದರೆ ನಾವು ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ನಿಂತು ರಾಜ್ಯಕ್ಕೆ ನ್ಯಾಯವನ್ನು ಪಡೆಯಬಹುದು ಎಂದು ಅವರು ಸಲಹೆ ನೀಡಿದರು.

2019ರ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಗೌಡರು, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿಜೆಪಿಯ ವಿ.ಸೋಮಣ್ಣ ಪರ ಪ್ರಚಾರಕ್ಕೆ ಇಳಿದಿದ್ದಾರೆ.

Latest Indian news

Popular Stories