ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ – ( ನಿವೃತ್ತ) ಏರ್ ಮಾರ್ಷಲ್ ಜನರಲ್ ಕೆ.ಸಿ ಕಾರ್ಯಪ್ಪ


ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ-ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯು ನಗರದ ಅರಣ್ಯ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಸಂರಕ್ಷಿಸುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ತಡೆಯಬೇಕಿದೆ ಎಂದರು.
ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಆರೋಗ್ಯ ಸೇವೆ ಸೇರಿದಂತೆ ಕಲ್ಯಾಣ ಸೇವೆಗಳು ತಲುಪಬೇಕು ಎಂದರು.


ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದು ಕಠಿಣವಾಗಿದ್ದು, ಎಲ್ಲಾ ಹಂತದ ಸಿಬ್ಬಂದಿಗಳು ತಮ್ಮ ಹಾಗೂ ಸಾರ್ವಜನಿಕರ ಸುರಕ್ಷತೆ ಕಡೆಗೂ ಗಮನಹರಿಸಬೇಕಿದೆ ಎಂದು ಸಲಹೆ ಮಾಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಅವರು ಮಾತನಾಡಿ ಅರಣ್ಯವಿದ್ದಲ್ಲಿ ಉತ್ತಮ ಪರಿಸರ ಉಳಿಯಲು ಸಾಧ್ಯ. ಒಳ್ಳೆಯ ಪರಿಸರ ಇದ್ದಲ್ಲಿ ಮಳೆ-ಬೆಳೆ ಕಾಣಲು ಸಾಧ್ಯ ಎಂದು ಹೇಳಿದರು.
ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ದೇಶಾದ್ಯಂತ ಆಚರಿಸಲಾಗುತ್ತದೆ ಎಂದರು.


ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ಶರಣಬಸಪ್ಪ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಂಗಪ್ಪ ಇತರರು ಅರಣ್ಯ ಹುತಾತ್ಮ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ, ಗೌರವ ಸಲ್ಲಿಸಿದರು.


ಅರಣ್ಯ ಹುತಾತ್ಮರ ದಿನಾಚರಣೆಯ ಪಕ್ಷಿನೋಟ ಮತ್ತು ಅರಣ್ಯ ಹುತಾತ್ಮರ ಸ್ಮರಣೆಯನ್ನು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಅವರು ಓದಿದರು.
ಜೋಧುಪುರ್‍ನ ಮಹಾರಾಜ ಅಭಯ್‍ಸಿಂಗ್‍ನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು, ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕಾರಣ, ಕಡಿಯಲು ವಿರೋದಿಸಿದ ಬಿಷ್ಣೋಯಿ ಸಮುದಾಯದ ಒಟ್ಟು 363 ಸಂಖ್ಯೆಯ ಪುರುಷ, ಮಹಿಳೆ ಮತ್ತು ಮಕ್ಕಳನ್ನು 1730 ರ ಸೆಪ್ಟೆಂಬರ್, 11 ರಂದು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ‘ರಾಷ್ಟ್ರೀಯ ಅರಣ್ಯ ಹುತಾತ್ಮ ದಿನ’ ಎಂದು ಘೋಷಿಸಿದೆ.
ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಸರ್ವೋಚ್ಛ ತ್ಯಾಗವನ್ನು ಮಾಡಿ ಸಮರ್ಪಣಾ ಮನೋಭಾವದ ಹಲವಾರು ಅರಣ್ಯ ಅಧಿಕಾರಿಗಳ ಹೆಸರುಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ. ಇವರ ಅಸಾಧಾರಣ ಪ್ರಯತ್ನಗಳು, ಧೈರ್ಯಶೀಲ ಕಾರ್ಯಗಳು ಮತ್ತು ಸರ್ವೋಚ್ಛ ತ್ಯಾಗಗಳು, ಅಪಾಯಕ್ಕೆ ಒಳಗಾದ, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ ಕಾಪಾಡಲು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ.


ಇಂತಹ ಆದರ್ಶ ವ್ಯಕ್ತಿಗಳಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ದಿವಂಗತ ಪಿ.ಶ್ರೀನಿವಾಸ್ ಭಾ.ಅ.ಸೇ. ಅವರು ಕೂಡ ಒಬ್ಬರು. ‘ಕಾಡಿಗಾಗಿ ಜನನ, ಕಾಡಿಗಾಗಿ ಜೀವನ, ಕಾಡಿಗಾಗಿ ಮರಣ’ ಎಂಬುದನ್ನೇ ತತ್ವಗಳನ್ನಾಗಿ ಇಟ್ಟುಕೊಂಡಿದ್ದ ಕರ್ನಾಟಕ ಅರಣ್ಯ ಇಲಾಖೆಯ ‘ವೀರ ಅಭಿಮನ್ಯು’ ಎಂದೇ ಕರೆಯಬಹುದಾದ ದಿವಂಗತ ಪಿ.ಶ್ರೀನಿವಾಸ್ ಅವರು ದಂತಚೋರ ಮತ್ತು ಕುಖ್ಯಾತ ಶ್ರೀಗಂಧ ಚೋರ, ಕಳ್ಳಸಾಗಾಣಿಕೆದಾರ, ಕಾಡುಗಳ್ಳ ವೀರಪ್ಪನ್‍ನ ನಯವಂಚನೆಯ ಚಕ್ರವ್ಯೂಹದಲ್ಲಿ ಸಿಲುಕಿ 1991 ರ ನವೆಂಬರ್, 10 ರಂದು ವಿಧಿವಶರಾದರು.


ದಿವಂಗತ ಪಿ.ಶ್ರೀನಿವಾಸ್ ಇವರ ಕಾರ್ಯದಕ್ಷತೆಯನ್ನು ಮೆಚ್ಚಿ ಭಾರತ ಸರ್ಕಾರವು ಇವರಿಗೆ ‘ಕೀರ್ತಿಚಕ್ರ’ ಎಂಬ ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ. ಹಾಗೂ ವೀರಪ್ಪನ್‍ನ ವಂಚನೆಯಿಂದ ಹುತಾತ್ಮರಾದ ಕೊಳ್ಳೆಗಾಲದ ಅರಣ್ಯ ರಕ್ಷಕರಾದ ಬಿ.ಸಿ.ಮೋಹನಯ್ಯ ಅವರ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಹಾಗೆಯೇ ಶಿರಸಿಯ ಮರಗಳ್ಳರ ಕ್ರೌರ್ಯಕ್ಕೆ ಬಲಿಯಾದ ವಲಯ ಅರಣ್ಯಾಧಿಕಾರಿ ಅರವಿಂದ್ ಹೆಗೆಡೆ ಅವರ ಶೌರ್ಯ ಕೂಡ ಸ್ಮರಣೀಯವಾಗಿದೆ ಎಂದು ಎ.ಟಿ.ಪೂವಯ್ಯ ಅವರು ಓದಿದರು.
ಅರಣ್ಯ ಇಲಾಖೆಯ ಸಿದ್ದಲಿಂಗಪ್ಪ ಅವರು ಪೆರೇಡ್ ನಡೆಸಿಕೊಟ್ಟರು. ಪೊಲೀಸ್ ಇಲಾಖೆಯ ಸಿದ್ದೇಶ್ ಮತ್ತು ತಂಡದವರು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು. ವಲಯ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ ನಿರೂಪಿಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ವಂದಿಸಿದರು.

Latest Indian news

Popular Stories