ಮಳೆಗೆ ಮನೆ ಕುಸಿತ

ಮಡಿಕೇರಿ ಜೂ.೩ : ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ
ಸುರಿದ ಗಾಳಿ ಮಳೆಗೆ ಗುಡಿಸಲೊಂದು ಕುಸಿದಿದ್ದು, ಅದೃಷ್ಟವಶಾತ್ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸವನತ್ತೂರು ಗ್ರಾಮದ ಆನೆ ಕೆರೆ ಸಮೀಪದ ಪೈಸಾರಿ ಜಾಗದಲ್ಲಿ ರಾಜಣ್ಣ ಎಂಬವರ ಜೇನು ಕುರುಬ ಜನಾಂಗದ ಕುಟುಂಬ ಕಳೆದ ೨೦ ವರ್ಷಗಳಿಂದಲೂ ಸಣ್ಣ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದೆ.
ಬುಧವಾರ ಸುರಿದ ಗಾಳಿ ಮಳೆಯಿಂದಾಗಿ ಈ ಗುಡಿಸಲಿನ ಗೋಡೆಯ ಕಂಬಗಳು ಕುಸಿದು ನೆಲಸಮಗೊಂಡಿದೆ. ರಾಜಣ್ಣ, ಅವರ ಪತ್ನಿ ನಾಗಮ್ಮ ಮತ್ತು ಮಗ ನಾಗೇಶ ಎಂಬವರು ಮಳೆ ಬರುವ ಸಂದರ್ಭ ಮನೆಯ ಒಳಗಡೆ ಇದ್ದು, ಜೋರಾಗಿ ಗಾಳಿ ಬೀಸುವಾಗ ರಾಜಣ್ಣ ಮತ್ತು ನಾಗಮ್ಮ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ನಾಗೇಶ ಹೊರಗೆ ಬರುವಷ್ಟರಲ್ಲಿ ಮನೆಯ ಗೋಡೆ ಕುಸಿದಿದೆ. ಪರಿಣಾಮವಾಗಿ ಮನೆಯ ಹೆಂಚು ಮತ್ತು ಬಿದಿರಿನ ಕಂಬಗಳು ನಾಗೇಶನ ಮೇಲೆ ಬಿದ್ದಿವೆ. ಅಲ್ಲದೆ ಅವರ ಮನೆಯ ಸಾಮಾನುಗಳು ಸಹ ಮಳೆಯಿಂದಾಗಿ ನೆನೆದುಹೋಗಿವೆ.
ನಾಗಮ್ಮ ಕೂಗಿಕೊಂಡು ಪಕ್ಕದ ಮನೆಯವರಿಗೆ ತಿಳಿಸಿದ ತಕ್ಷಣವೇ ಸ್ಥಳೀಯರು ಅಲ್ಲಿಗೆ ಹೋಗಿ ನಾಗೇಶನನ್ನು ಹೊರಗೆ ಎಳೆದು ತಂದಿದ್ದಾರೆ. ನಾಗೇಶನಿಗೆ ಕೈ ಮತ್ತು ತಲೆಗೆ ಪೆಟ್ಟಾಗಿದೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ರಮೇಶ್ ತಕ್ಷಣ ಭೇಟಿ ನೀಡಿ ಗಾಯವಾಗಿದ್ದ ನಾಗೇಶ್ ನನ್ನು ಕುಶಾಲನಗರದ ಆಸ್ಪತ್ರೆ ಕಳುಹಿಸಿದ್ದಾರೆ.
ತೀರಾ ಕಡುಬಡವರಾಗಿರುವ ರಾಜಣ್ಣ ಅವರ ಕುಟುಂಬಕ್ಕೆ ಬೇರೆ ಸ್ಧಳದ ವ್ಯವಸ್ಥೆ ಮಾಡಿ ಊಟ, ಮತ್ತು ಮಲಗುವ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸ್ಥಳೀಯರು ಮಾಡಿದ್ದಾರೆ.
ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಚಂದ್ರು, ಕೂಡಿಗೆ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಸ್ಧಳ ಪರಿಶೀಲನೆ ನಡೆಸಿದರು. ಗ್ರಾಮದ ಪ್ರಮುಖರಾದ ವರದರಾಜ್ ದಾಸ್, ಸಂತೋಷ್, ಸಹದೇವ ಸೇರಿದಂತೆ ಅನೇಕ ಮಂದಿ ಇದ್ದರು. ಫೋಟೋ :: ರೈನ್

Latest Indian news

Popular Stories