ಆಸಿಡ್‌ ದಾಳಿ ಪ್ರಕರಣ: 3 ವಿದ್ಯಾರ್ಥಿನಿಯರನ್ನು ಭೇಟಿಯಾದ ಮಹಿಳಾ ಆಯೋಗದ ಅಧ್ಯಕ್ಷೆ, ತಲಾ 4 ಲಕ್ಷ ಪರಿಹಾರ ಭರವಸೆ!

ಮಂಗಳೂರು: ಆಯಸಿಡ್ ದಾಳಿಗೊಳಗಾದ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಇಲ್ಲಿನ ಎ.ಜೆ.ಆಸ್ಪತ್ರೆಯಲ್ಲಿ ಮಂಗಳವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ಸಂತ್ರಸ್ತ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಯಸಿಡ್ ದಾಳಿಗೆ ಒಳಗಾದ ಮೂವರೂ ಅಪಾಯದಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಸಂತ್ರಸ್ತೆಯರಲ್ಲಿ ಒಬ್ಬಳಿಗೆ ಶೇ 20ರಷ್ಟು, ಮತ್ತೊಬ್ಬಳಿಗೆ ಶೇ 12ರಷ್ಟು ಹಾಗೂ ಇನ್ನೊಬ್ಬಳಿಗೆ ಶೇ 10ರಷ್ಟು ಸುಟ್ಟ ಗಾಯಗಳಾಗಿವೆ. ಗಾಯದ ತೀವ್ರತೆ ನೋಡಿಕೊಂಡು ಅವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಒಂದು ವಾರಗಳ ಬಳಿಕ ಇಬ್ಬರು ವಿದ್ಯಾರ್ಥಿನಿಯರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗುತ್ತದೆ.

ಮತ್ತೊಬ್ಬಳ ಗಾಯದ ವಾಸಿಯಾಗುವಿಕೆ ಆಧರಿಸಿ ಪ್ಲಾಸ್ಟಿಕ್ ಸರ್ಜರಿ ಬೇಕೋ ಬೇಡವೋ ಎಂಬ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ.ಸಂತ್ರಸ್ತೆಯರಿಗೆ ಚಿಕಿತ್ಸೆಗೆ ತಕ್ಷಣ ತಲಾ ₹ 4 ಲಕ್ಷವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಒಟ್ಟು ₹20 ಲಕ್ಷ ಪರಿಹಾರ ನೀಡಲು ಅವಕಾಶ ಇದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ‌ಕೈಗೊಳ್ಳುತೇನೆ ಎಂದರು. ಸದ್ಯಕ್ಕೆ ವಿದ್ಯಾರ್ಥಿನಿಯರು ಪರೀಕ್ಷೆ ಬಗ್ಗೆ ಹೆಚ್ಚು ಆತಂಕಿತರಾಗಿದ್ದಾರೆ. ಮೊದಲ ದಿನ ಬರೆದ ಕನ್ನಡ ಪರೀಕ್ಷೆಯನ್ನು ಮತ್ತೆ ಬರೆಯಬೇಕಾ ಎಂದು ಪ್ರಶ್ನಿಸಿದರು‌. ಈ ಬಗ್ಗೆ ಭಯ ಬೇಡ ಎಂದು ಧೈರ್ಯ ತುಂಬಿದ್ದೇನೆ ಇಂತಹ ಒತ್ತಡ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಸ್ಥೈರ್ಯ ತುಂಬುವ ಅಗತ್ಯವಿದೆ ಎಂದರು.

Latest Indian news

Popular Stories