
ಪಂಜಾಬ್ ಸಿ.ಎಮ್ ಪ್ರಧಾನ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಶಾಂತ್ ಕಿಶೋರ್!
ಪಂಜಾಬ್: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪ್ರಧಾನ ಸಲಹೆಗಾರ ಸ್ಥಾನಕ್ಕೆ ಪ್ರಶಾಂತ್ ಕಿಶೋರ್ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಕಿಶೋರ್, ” ಸಾರ್ವಜನಿಕ ಜೀವನದಲ್ಲಿ ಸಕ್ರಿಯನಾಗುವ ಉದ್ದೇಶದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಭವಿಷ್ಯದ ಬಗ್ಗೆ ಈಗೇನೂ ಯೋಚನೆ ಮಾಡಿಲ್ಲ. ಮುಂದೆ ರಾಜಕೀಯದೊಂದಿಗೆಯೇ ಇರುತ್ತೇನೋ, ಇಲ್ಲವೋ ಎನ್ನುವುದರ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎಂದು ಕೂಡ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ನಿಮಗೆ ತಿಳಿದಿರುವಂತೆ, ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಉದ್ದೇಶದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವ ನನ್ನ ನಿರ್ಧಾರದ ದೃಷ್ಟಿಯಿಂದ, ನಿಮ್ಮ ಪ್ರಧಾನ ಸಲಹೆಗಾರನಾಗಿ ನಾನು ಜವಾಬ್ದಾರಿಯಿಂದ ಹೊರಬರಲು ಇಚ್ಛಿಸಿದ್ದೇನೆ. ನನ್ನ ಮುಂದಿನ ಕ್ರಮದ ಬಗ್ಗೆ ನಾನು ಇನ್ನೂ ತೀರ್ಮಾನಿಸದ ಕಾರಣ, ಈ ಜವಾಬ್ದಾರಿಯಿಂದ ನನ್ನನ್ನು ಮುಕ್ತಗೊಳಿಸುವಂತೆ ವಿನಂತಿಸುತ್ತೇನೆ “ಎಂದು ಪತ್ರದಲ್ಲಿ ಬರೆದಿರುವುದಾಗಿ ವರದಿ ತಿಳಿಸಿದೆ.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ಕುರಿತು ಕೂಡ ಚರ್ಚೆ ನಡೆಯುತ್ತಿದ್ದು ಇತ್ತೀಚೆಗೆ ಗಾಂಧಿ ಕುಟುಂಬದೊಂದಿಗೆ ನಡೆಸಿದ ಚರ್ಚೆ ಈ ವಾದಕ್ಕೆ ಪುಷ್ಟಿ ನೀಡಿದೆ.




