
ಮಾನವಕುಲಕ್ಕೆ ಜ್ಞಾನದ ಬೆಳಕು ನೀಡಿದ ಪ್ರವಾದಿ | ನಲ್ವತ್ತೋಕ್ಲಿನಲ್ಲಿ ನಡೆದ ಕಂದೂರಿ ಆಚರಣೆಯಲ್ಲಿ ಸೂಫಿ ಹಾಜಿ ನುಡಿ
ಗೋಣಿಕೊಪ್ಪಲು, ಅ.15: ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಪುಣ್ಯ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದರ್ಶ ಮತ್ತು ದೂರದೃಷ್ಟಿತ್ವದ ಬೋಧನೆ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿಲ್ಲ. ಅವರು ಅಜ್ಞಾನವನ್ನು ತೊಲಗಿಸಿ ಇಡೀ ಮಾನವ ಕುಲಕ್ಕೆ ಜ್ಞಾನದ ಮೂಲಕ ಬೆಳಕು ನೀಡಿದ ಮಹಾನ್ ಪ್ರವಾದಿಯಾಗಿದ್ದಾರೆ. ತಮ್ಮ ಬದುಕಿನ ಮೂಲಕ ಪ್ರವಾದಿಯವರು ಮನುಕುಲಕ್ಕೆ ನೀಡಿದ ಸಂದೇಶದ ಕುರಿತು ವ್ಯಾಪಕ ಬೋಧನೆಯಾಗಬೇಕಾಗಿರುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ಅಧ್ಯಕ್ಷರಾದ ದುದ್ಧಿಯಂಡ ಹೆಚ್. ಸೂಫಿ ಹಾಜಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮಮಾಸಾಚರಣೆಯ ಅಂಗವಾಗಿ ಈದ್ ಮಿಲಾದ್ ಸಂರಕ್ಷಣಾ ಸಮಿತಿ ವತಿಯಿಂದ ವಿರಾಜಪೇಟೆ ಸಮೀಪದ ನಲ್ವತ್ತೋಕ್ಲಿನಲ್ಲಿ ಭಾನುವಾರದಂದು ನಡೆದ ಕಂದೂರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾದಿಯವರ ಶಾಂತಿ ಸಂದೇಶದ ಬೋಧನೆಯಿಂದ ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಬೀರಿದರೆ ಅದು ಸಮಾಜದಲ್ಲಿ ಮತ್ತಷ್ಟು ಭಾವೈಕ್ಯತೆ ಮೂಡಲು ನೆರವಾಗುತ್ತದೆ. 1400 ವರ್ಷಗಳ ಹಿಂದೆಯೇ ಸರ್ವಧರ್ಮ ಸಮನ್ವಯತೆ ಮತ್ತು ಸಮಸಮಾಜದ ತತ್ವವನ್ನು ಬೋಧಿಸಿದ ಹಾಗು ಇಂದಿಗೂ ಕೋಟ್ಯಾಂತರ ಜನರು ಹೃದಯದಿಂದ ಪ್ರೀತಿಸುತ್ತಿರುವ ಪ್ರವಾದಿ ಮೊಹಮ್ಮದ್ ಅವರ ದಿವ್ಯ ಸಂದೇಶ ಸಾರ್ವಕಾಲಿಕ ಸತ್ಯವಾಗಿದೆ ಎಂದು ಒತ್ತಿ ಹೇಳಿದರು.
ಪ್ರತಿ ವರ್ಷ ಅದ್ದೂರಿಯಿಂದ ಆಚರಿಸಲ್ಪಡುವ ಕಂದೂರಿ ನಲ್ವತ್ತೋಕ್ಲು ಗ್ರಾಮಕ್ಕೆ ವಿಶೇಷ ಮೆರಗನ್ನು ನೀಡುತ್ತಿದೆ. ಜೊತೆಗೆ ಪ್ರವಾದಿಯವರ ಜನ್ಮ ದಿನಾಚರಣೆಯ ಅಂಗವಾಗಿ ಜರುಗುವ ಈ ಕಂದೂರಿ ಆಚರಣೆ ಇಡೀ ಕೊಡಗು ಜಿಲ್ಲೆಯ ನಲ್ವತ್ತೋಕ್ಲು ಗ್ರಾಮದಲ್ಲಿ ಮಾತ್ರ ವರ್ಷಂಪ್ರತಿ ನಡೆಯುತ್ತಿರುವುದು ಇದರ ಮತ್ತೊಂದು ವಿಶೇಷತೆಯಾಗಿದೆ ಎಂದು ತಿಳಿಸಿದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಸೂಫಿ ಹಾಜಿ, ಜಾತಿ-ಮತಗಳನ್ನು ಲೆಕ್ಕಿಸದೆ ಪ್ರತಿ ವರ್ಷ ಈ ಕಂದೂರಿಗೆ ಸಹೋದರ ಸಮುದಾಯದವರು ಬಂದು ಸಾಮರಸ್ಯ ಮೆರೆಯುತ್ತಿರುವುದು ಉತ್ತಮ ಬೆಳವಣಿಕೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಸಿದ್ಧ ಪ್ರಭಾಷಣಗಾರರಾದ ನೌಫಲ್ ಸಖಾಫಿ ಕಳಸ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ನಲ್ವತ್ತೋಕ್ಲಿನ ಕುತ್ಬಿಯತ್ ಸಂಘದ ಅಧ್ಯಕ್ಷರಾದ ಕೆ.ಎ. ಸುಬೈರ್, ನಲ್ವತ್ತೋಕ್ಲಿನ ರಾತೀಬ್ ತಂಡದ ಖಲೀಫರಾದ ಎಂ. ಎಚ್. ಅಹಮದ್, ಹಿರಿಯ ಕಾಂಗ್ರೆಸ್ ಮುಖಂಡರಾದ ಚಿಲ್ಲವಂಡ ಕಾವೇರಪ್ಪ, ಸ್ಥಳೀಯ ಗ್ರಾ. ಪಂ. ಸದಸ್ಯರಾದ ಪಿ.ಎ. ಹನೀಫ್, ನಲ್ವತ್ತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಡಿ.ಎಫ್. ಅಶ್ರಫ್, ಕಾರ್ಯದರ್ಶಿ ಡಿ. ಎಂ. ಯೂಸೂಫ್, ಐಮಂಗಲ ಜುಮಾ ಮಸೀದಿ ಅಧ್ಯಕ್ಷರಾದ ಕೋಳುಮಂಡ ರಫೀಕ್, ನಲ್ವತ್ತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಉಸ್ತಾದ್ಗಳಾದ ಸಫ್ವಾನ್ ಸಖಾಫಿ, ಹಂಸ ಮುಸ್ಲಿಯಾರ್, ಸೌಕತ್ ಮುಸ್ಲಿಯರ್, ಶಹೀರ್ ಮುಸ್ಲಿಯರ್ ಮೊದಲದವರು ಉಪಸ್ಥಿತರಿದ್ದರು. ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಎಂ. ರಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಹಿರಿಯ ವಿದ್ವಾಂಸರಾದ ಸಯ್ಯದ್ ಮಹದಿ ತಂಗಳ್ ನೇತೃತ್ವ ನೀಡಿದರು. ನಲ್ವತ್ತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಮುಬಸ್ಸಿರ್ ಅಹಸನಿ ಕಾಮಿಲ್ ಕಾರ್ಯಕ್ರಮ ಉದ್ಘಾಟಿಸಿದರು. ಪಿ. ಎ. ಸಿರಾಜುದ್ದೀನ್ ಸ್ವಾಗತಿಸಿದರು. ಪಿ.ಎ. ಮಜೀದ್ ಕಾರ್ಯಕ್ರಮ ನಿರ್ವಹಿಸಿ ಬಳಿಕ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ವಿವಿಧ ದಿನಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ವಿಶ್ವಾಸಿಗಳು ಪಾಲ್ಗೊಂಡಿದ್ದರು. ಕೊನೆಯಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.
ಇದಕ್ಕೂ ಮೊದಲು ಶನಿವಾರ ರಾತ್ರಿ ನಡೆದ ಕಂದೂರಿ ಕಾರ್ಯಕ್ರಮವನ್ನು ಸಮಿತಿ ಅಧ್ಯಕ್ಷರಾದ ಕೆ.ಎಂ. ರಫಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ರಾತ್ರಿ ಕೇರಳದ ಪ್ರಸಿದ್ಧ ವಿದ್ವಾಂಸರಾದ ಮುಳ್ಳೂರ್ಕರ ಮೊಹಮ್ಮದಾಲಿ ಸಖಾಫಿ ವಿಶೇಷ ಧಾರ್ಮಿಕ ಉಪನ್ಯಾಸ ನೀಡಿದರು.




