ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ವಿವರ ಪ್ರಕಟಿಸಲು ಒತ್ತಾಯ

ರಾಯಚೂರು: ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದು, ಆಯಾ ತರಗತಿಗೆ ನಿಗದಿ ಮಾಡಿದ ಶುಲ್ಕದ ವಿವರ ಸೂಚನಾಫಲಕ ಪ್ರಕಟಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡುವಂತೆ ಒತ್ತಾಯಿಸಿ ಸೋಮವಾರ ಸಿಪಿಐ(ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಮನವಿ ಸಲ್ಲಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್, ಕ್ಯಾಪಿಟಿಷೇನ್, ದುಬಾರಿ ಶುಲ್ಕಗಳನ್ನು ವಿಧಿಸಿ ಜನ ಸಾಮಾನ್ಯರ, ಬಡ, ಮಧ್ಯಮವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹೊರೆ ಮಾಡುತ್ತಿದೆ. ಹೆಚ್ಚಿನ ಶುಲ್ಕವನ್ನು ವಿಧಿಸುವುದನ್ನು ತಡೆಗಟ್ಟಲು ಪ್ಸಿಪಿಐಎಂ ಪಕ್ಷ ಹಾಗೂ ಇತರೆ ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ನಮ್ಮ ಹೋರಾಟಕ್ಕೆ ಕಿವಿಗೊಟ್ಟ ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಗೆ ದುಬಾರಿ ಶುಲ್ಕ ತಡೆಗೆ ಕಟ್ಟುನಿಟ್ಟಿನ ಆದೇಶವ ಹೊರಡಿಸಿದ್ದು ಸ್ವಾಗತಾರ್ಹವಾಗಿದೆ.

ಸರ್ಕಾರದ ಆದೇಶದ ಪ್ರಕಾರ ಪ್ರತಿ ಖಾಸಗಿ ಶಾಲೆಗಳು ತಮ್ಮ ಸೂಚನಾ ಫಲಕದಲ್ಲಿ ಹಾಗೂ ವೆಬ್ ಸೈಟ್ ನಲ್ಲಿ ತರಗತಿವಾರು ನಿಗದಿ ಪಡಿಸಿರುವ ಒಟ್ಟಾರೆ ಶುಲ್ಕದ ಮಾಹಿತಿಯನ್ನು ಪ್ರತಿ ಶಾಲೆಯ ನಾಮ ಫಲಕದ ಮೇಲೆ ಕಣ್ಣಿಗೆ ಕಾಣುವ ಹಾಗೆ ಬಹಿರಂಗವಾಗಿ ಪ್ರಕಟಿಸಬೇಕು. ಇದಕ್ಕೂ ಮುಂದೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವ ತರಗತಿಗೆ ಎಷ್ಟೇಷ್ಟು ಶುಲ್ಕ ತೆಗೆದುಕೊಳ್ಳಬೇಕೆಂದು ಸಾರ್ವಜನಿಕವಾಗಿ ಆನ್ ಲೈನ್ ತಂತ್ರಾಂಶಗಳ ಮತ್ತು ಮಾದ್ಯಮಗಳ ಮೂಲಕ ಪ್ರಕಟಿಸಬೇಕು.

ಈ ಕುರಿತು ಪ್ರತಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ತಿಳಿಯಪಡಿಸಲು ಕರಪತ್ರಗಳ ಮೂಲಕ ಅಥವಾ ಸಾಮಾಜಿಕ ಜಾಲತಾಣಗಳ ಸಹಾಯದಿಂದ ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ಒತ್ತಾಯಿಸಿದರು.

ಶಿಕ್ಷಣ ಇಲಾಖೆಯ ಶುಲ್ಕ ನಿಗದಿಯ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಸಮಿತಿಯ ಸದಸ್ಯ ಜಿ.ಅಮರೇಶ, ಜಿಲ್ಲಾ ಮುಖಂಡರಾದ ಅಜೀಜ್ ಜಾಗೀರದಾರ, ನಿರಂಜನಕುಮಾರ, ಸೈಯದ್ ಅಬ್ಬಾಸ್ ಅಲಿ, ಲಕ್ಷ್ಮಣ ಇದ್ದರು.

Latest Indian news

Popular Stories