೧೫.೨೨ ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ನಾಶ- ಎಸ್ಪಿ

ರಾಯಚೂರು, ಜೂ.೨೬ (ಕ.ವಾ):- ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಪೊಲೀಸರು ವಶಪಡಿಸಿಕೊಂಡ ಸುಮಾರು ೧೫.೨೨ ಲಕ್ಷ ಮೌಲ್ಯದ ೨೮೧ ಕೆ.ಜಿ. ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಅವರ ನೇತೃತ್ವದಲ್ಲಿ ನಾಶ ಪಡಿಸಲಾಯಿತು.

ಜು.೨೬ರ ಶನಿವಾರ ನಗರದ ಯಕ್ಲಾಸಪೂರು ರಸ್ತೆಯಲ್ಲಿರುವ ವೈದ್ಯಕೀಯ ತ್ಯಾಜ್ಯ ನಾಶ ಪಡಿಸುವ ಸ್ಥಳದಲ್ಲಿ ಮಾದಕ ವಸ್ತುಗಳನ್ನು ನಾಶ ಪಡಿಸಲಾಯಿತು.

ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು, ಡಿಜಿ ಮತ್ತು ಐಜಿಪಿ ಸೂಚನೆ ಮೇರೆಗೆ ಜಿಲ್ಲೆಯಾದ್ಯಂತ ಜಪ್ತಿಯಾದ ಪ್ರಕರಣಗಳ ವಸ್ತುಗಳನ್ನು ಡ್ರಗ್ ಡಿಸ್ಪೋಜಲ್ ಕಮಿಟಿಯಿಂದ ಕಳೆದ ೪ ವರ್ಷಗಳ ಹಿಂದೆ ವಶಕ್ಕೆ ಪಡೆದ ೨೮೧ ಕೆ.ಜಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ನಾಶ ಪಡಿಸಿ, ಸುಮಾರು ೪೦ ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದರು.

ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ಸಿಂಧನೂರು ತಾಲೂಕುಗಳಲ್ಲಿ ಹತ್ತಿ ಬೆಳೆಯುವ ಸಂದರ್ಭದಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ನಾಲ್ಕು ವರ್ಷದ ಹಳೆಯ ಸಂಗ್ರಹವನ್ನು ಇದೀಗ ವಿಲೇವಾರಿ ಮಾಡಲಾಗಿದೆ, ಸಿಂಧನೂರು ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ೫ ಕೆ.ಜಿ ಗಾಂಜಾವನ್ನು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಶ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು, ಡಿವೈಎಸ್‌ಪಿ ಶಿವನಗೌಡ ಪಾಟೀಲ್, ಐಎಂಎ ಅಧ್ಯಕ್ಷ ಡಾ.ರಾಮಪ್ಪ, ಕಾರ್ಯದರ್ಶಿ ಡಾ.ನಾಗರಾಜ ಬಾಲ್ಕಿ ಇತರರು ಇದ್ದರು.

Latest Indian news

Popular Stories