ರಿಮ್ಸ್ ಬಿ ಬ್ಲಾಕ್ ಕಾಮಗಾರಿ ಕಳಪೆ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು: ನಗರದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( ರಿಮ್ಸ್) ಯಲ್ಲಿ ಬಿ ಬ್ಲಾಕ್ ಕಟ್ಟಡ ಉದ್ಘಾಟನೆಯಾಗಿ 4 ತಿಂಗಳಿನಲ್ಲಿಯೇ ಸೋರುತ್ತಿದ್ದು ಕಳಪೆ ಕಾಮಗಾರಿ ನಡೆದಿರುವ ಶಂಕೆಯಿದೆ. ಗುತ್ತಿಗೆದಾರರ ಹಾಗೂ ತಾಂತ್ರಿಕ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ವಿಭಾಗೀಯ ಅಧ್ಯಕ್ಷ ರಾಮು ಒತ್ತಾಯಿಸಿದರು.

300 ಹಾಸಿಗೆಯ ಬಿ ಬ್ಲಾಕ್ ಕಟ್ಟಡ ₹32 ಕೋಟಿ ವೆಚ್ಚದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ಉಪ ವಿಭಾಗದ ಮೇಲುಸ್ತುವಾರಿಯಲ್ಲಿ ಕಾಮಗಾರಿ ನಿರವಹಿಸಲಾಗಿದೆ. ಎಂಜಿನಿಯರ್ ಪಂಪನಗೌಡ ಗುತ್ತಿಗೆ ಪಡೆದಿದ್ದರು. ಗುಣಮಟ್ಟದ ಕಾಮಗಾರಿ ಮಾಡದ ಕಾರಣ ಗೋಡೆಗಳು ಬಿರುಕು ಬಿಟ್ಟಿದೆ. ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಅಪಾಯ ಎದುರಾಗಿದೆ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ದೂರಿದರು.

ಈ ಬಗ್ಗೆ ರಿಮ್ಸ್ ನಿರ್ದೇಶಕರಿಗೆ ಕೇಳಿದರೆ ಮೂರನೇ ತಂಡದಿಂದ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದು, ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಯವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಸವರಾಜ, ಶಿವಕುಮಾರ, ಸುರೇಶ, ಪ್ರಕಾಶ ಇದ್ದರು.

Latest Indian news

Popular Stories