ಯೋಜನೆಯ ಸೌಲಭ್ಯಗಳು ಜನರಿಗೆ ತಲುಪುವಲ್ಲಿ ಸಿಬ್ಬಂದಿಗಳ ಪಾತ್ರ ದೊಡ್ಡದು; ಡಾ.ಚಂದ್ರಿಕಾ

ರಾಯಚೂರು, ಜು.೦೯, (ಕ.ವಾ):- ಜನಸಾಮಾನ್ಯರಲ್ಲಿ ಕುಟುಂಬ ಕಲ್ಯಾಣ ಇಲಾಖೆಯ ಯೋಜನೆ ಮಹತ್ವ ಹಾಗೂ ಅರಿವು ಮೂಡಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳನ್ನು ಒದಗಿಸುವಲ್ಲಿ ಆರೋಗ್ಯೆ ಇಲಾಖೆಯ ಸಿಬ್ಬಂದಿಗಳ ಶ್ರಮ ದೊಡ್ಡದಾಗಿದೆ ಎಂದು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ.ಚಂದ್ರಿಕಾ ಬಿ.ಆರ್. ಅವರು ಕರೆ ನೀಡಿದರು.

ತಾಲ್ಲೂಕಿನ ಗುಂಜಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
ಒಂದು ಮಗುವಿಗೂ ಇನ್ನೊಂದು ಮಗುವಿಗೂ ಕನಿಷ್ಠ ೩ರಿಂದ ೫ ವರ್ಷ ಅಂತರವಿರಬೇಕು. ಇದರಿಂದ ಹೆಣ್ಣು ದೈಹಿಕವಾಗಿ, ಸಾಮಾಜಿಕವಾಗಿ ಆರೋಗ್ಯಕರ ಜೀವನ ನಡೆಸಬಲ್ಲಳು. ಉತ್ತಮ ತಾಯಿ ಮತ್ತು ಮಕ್ಕಳ ಆರೋಗ್ಯ ಕಾಪಾಡಲು ಕುಟುಂಬ ಯೋಜನೆಯ ವಿಧಾನಗಳಾದ ತಾತ್ಕಾಲಿಕ, ಆಧುನಿಕ ಅಲ್ಪಾವಧಿ ಮತ್ತು ಧೀರ್ಘಕಾಲಿನ ಗರ್ಭ ನಿರೋಧಕಗಳ ಮಾಹಿತಿ ಸಮಾಲೋಚನೆ ಸೇವೆಯನ್ನು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ವಿವರಿಸಿದ್ದಾರೆ.
ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಸಂಚಾರಿ ಐಇಸಿ ವಾಹನದಲ್ಲಿ ಕೋವಿಡ್-೧೯ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕುಟುಂಬ ಯೋಜನೆಗಳ ವಿಧಾನಗಳ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವ್ಯಾಪಕ ಪ್ರಚಾರ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಾಲ್ಲೂಕಾ ಆರೋಗ್ಯ ಅಧಿಕಾರಿ ಡಾ. ಮಹ್ಮಮದ್ ಶಾಕೀರ್, ಆಯುಷ್ ವೈದ್ಯಾಧಿಕಾರಿ ಡಾ.ಸುನಿತಾ, ಆರೋಗ್ಯ ಇಲಾಖೆಯ ಹಿರಿಯ ನಿರಿಕ್ಷಣಾಧಿಕಾರಿ ನರಸಿಂಗ್ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಕಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಅಮರೇಶ್ ಗಡ್ಡಿ ಸೇರಿದಂತೆ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಭಂದಿಗಳು ಉಪಸ್ಥಿತರಿದ್ದರು.

Latest Indian news

Popular Stories