ಏಷ್ಯಾಕಪ್ 2023: ಪಾಕಿಸ್ತಾನ ವಿರುದ್ಧ ಭಾರತಕ್ಕೆ 228ರನ್ ಗಳ ಭರ್ಜರಿ ಜಯ

ಕೊಲಂಬೋ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 228 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 357ರನ್ ಗಳ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 32 ಓವರ್ ನಲ್ಲಿ 128 ರನ್ ಗಳಿಸಿ 228ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಪಾಕಿಸ್ತಾನದ ಪರ ಆರಂಭಿಕ ಆಟಗಾರ ಫಖರ್ ಜಮಾನ್ ಗಳಿಸಿದ 27 ರನ್ ಗಳೇ ಆ ತಂಡದ ಬ್ಯಾಟರ್ ಗಳಿಸಿದ ಗರಿಷ್ಟ ರನ್ ಆಗಿತ್ತು.

ನಾಯಕ ಬಾಬರ್ ಅಜಂ 10 ರನ್ ಗಳಿಸಿದರೆ, ಅಘಾ ಸಲ್ಮಾನ್ ಮತ್ತು ಇಫ್ತಿಕಾರ್ ಅಹ್ಮದ್ ತಲಾ 23 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. 

128 ರನ್ ಗಳಿಸಿದ್ದ ವೇಳೆ ಫಾಹೀಂ ಅಶ್ರಫ್ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರು. ಇದು ಪಾಕಿಸ್ತಾನದ 8ನೇ ವಿಕೆಟ್ ಆಗಿತ್ತು. ಆದರೆ ಆ ಬಳಿಕ ಪಾಕಿಸ್ತಾನದ ಬಾಕಿ ಇಬ್ಬರು ಆಟಗಾರರು ಬ್ಯಾಟಿಂಗ್ ಬರಲಿಲ್ಲ. ನಸೀಮ್ ಶಾ ಮತ್ತು ಹ್ಯಾರಿಸ್ ಗಾಯಗೊಂಡಿದ್ದರಿಂದ ಅವರು ಬ್ಯಾಟಿಂಗ್ ಗೆ ಬರಲಿಲ್ಲ. ಹೀಗಾಗಿ ಪಾಕಿಸ್ತಾನ ತಂಡವನ್ನು ಆಲೌಟ್ ಎಂದು ಘೋಷಿಸಿ ಭಾರತ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಆ ಮೂಲಕ ಭಾರತ ಪಾಕಿಸ್ತಾನದ ವಿರುದ್ಧ 228ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು. ಭಾರತದ ಪರ ಕುಲದೀಪ್ ಯಾದವ್ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಜಸ್ ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.

Latest Indian news

Popular Stories