9 ಎಸೆತದಲ್ಲಿ ಅರ್ಧಶತಕ, 34 ಬಾಲ್‌ ನಲ್ಲಿ ಶತಕ, T20 ಯಲ್ಲಿ 314 ರನ್‌: ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ನೇಪಾಳ!

ಹ್ಯಾಂಗ್ಝೌ: ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್ ವಿಭಾಗದಲ್ಲಿ ಕ್ರಿಕೆಟ್ ಶಿಶು ನೇಪಾಳ ಅಕ್ಷರಶಃ ಇತಿಹಾಸದ ಅಪರೂಪದ ದಾಖಲೆ ನಿರ್ಮಿಸಿದೆ.

9 ಎಸೆತದಲ್ಲಿ ಅರ್ಧಶತಕ, 34 ಬಾಲ್‌ಗಳಲ್ಲಿ ಶತಕ, T20ಯಲ್ಲಿ 314 ರನ್‌..ಹೌದು.. ಇದು ಏಷ್ಯನ್ ಗೇಮ್ಸ್ (Asian Games 2023) ಕ್ರಿಕೆಟ್​ ಸ್ಪರ್ಧೆಯ ಗ್ರೂಪ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ಪುರುಷರ ತಂಡ ಸ್ಕೋರ್ ಕಾರ್ಡ್.. ಏಷ್ಯನ್ ಗೇಮ್ಸ್ ಕ್ರಿಕೆಟ್​ ಸ್ಪರ್ಧೆಯ ಗ್ರೂಪ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ಪುರುಷರ ತಂಡ ಇತಿಹಾಸ ಸೃಷ್ಟಿಸಿದೆ. ಪುರುಷರ ಟೂರ್ನಮೆಂಟ್ ಆರಂಭವಾಗುತ್ತಿದ್ದಂತೆ ಸರಣಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆಗಳ ಸರಮಾಲೆಯೇ ನಿರ್ಮಾಣವಾಗಿದೆ.

ನೇಪಾಳ ತಂಡವು ಮಂಗೋಲಿಯಾ ವಿರುದ್ಧ 20 ಓವರ್​ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಬರೊಬ್ಬರಿ 314 ರನ್ ಗಳ ನಂಬಲಸಾಧ್ಯವಾದ ಸ್ಕೋರ್ ದಾಖಲಿಸಿದೆ. ಈ ಮೊತ್ತದಲ್ಲಿ 9 ಎಸೆತದಲ್ಲಿ ಅರ್ಧಶತಕ, 34 ಬಾಲ್‌ಗಳಲ್ಲಿ ಶತಕಲೂ ಸೇರಿದೆ. ಒಟ್ಟಾರೆ ಕೇವಲ 120 ಎಸೆತಗಳಲ್ಲಿ 300 ರನ್​ ದಾಖಲಿಸಿ ನೇಪಾಳ ಅಚ್ಚರಿ ಮೂಡಿಸಿದೆ. ಅಂತೆಯೇ ಚುಟುಕು ಕ್ರಿಕೆಟ್ ಅಂತಾರಾಷ್ಟ್ರೀಯ ಟಿ20ಯಲ್ಲಿ 300 ರನ್​ಗಳ ಗಡಿಯನ್ನು ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ನೇಪಾಳ ಪಾತ್ರವಾಗಿದೆ.

9 ಎಸೆತಗಳಲ್ಲಿ ಅರ್ಧ ಶತಕ: ಯುವಿ ದಾಖಲೆ ಕೂಡ ಪತನ, ರೋಹಿತ್ ದಾಖಲೆಯೂ ಲೆಕ್ಕಕ್ಕಿಲ್ಲ
2007ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ಅವರ ದೀರ್ಘಕಾಲದ ದಾಖಲೆಯನ್ನು ನೇಪಾಳ ಬ್ಯಾಟರ್​ ದೀಪೇಂದ್ರ ಸಿಂಗ್ ಐರಿ ಮುರಿದರು. ಅವರು 9 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ 10 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು, ಅದರಲ್ಲಿ 48 ರನ್​ಗಳು ಸಿಕ್ಸರ್​ಗಳ ಮೂಲಕೇ ಬಂದಿದ್ದವು.

ಮಾತ್ರವಲ್ಲದೇ ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯೂ ಮುರಿಯಿತು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್​​ ಡೇವಿಡ್ ಮಿಲ್ಲರ್ ಅವರನ್ನು ಹಿಂದಿಕ್ಕಿದ ನೇಪಾಳ ಬ್ಯಾಟರ್​​ ಕುಶಾಲ್ ಮಲ್ಲಾ ಕೇವಲ 34 ಎಸೆತಗಳಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವೇಗವಾಗಿ ಶತಕ ಗಳಿಸಿದರು. ಇಬ್ಬರೂ ಬ್ಯಾಟರ್​ಗಳಲ್ಲಿ 35 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದ್ದರು. ಮಲ್ಲಾ 8 ಬೌಂಡರಿ ಮತ್ತು 12 ಸಿಕ್ಸರ್​ಗಳನ್ನು ಬಾರಿಸಿ ಕೇವಲ 50 ಎಸೆತಗಳಲ್ಲಿ 137 ರನ್ ಗಳಿಸಿ ಅಜೇಯರಾಗಿ ಉಳಿದರು.

Latest Indian news

Popular Stories