ಪ್ರಜ್ವಲ್ ಪ್ರಕರಣ: ನೈತಿಕ ಅಧಪತನದ ಪರಮಾವಧಿ :ವೆಲ್ಫೇರ್ ಪಾರ್ಟಿ

ಬೆಂಗಳೂರು: ಹಾಸನದ ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಪ್ರಕರಣದಿಂದ ರಾಜ್ಯವು ದೇಶದ ಮುಂದೆ ತಲೆತಗ್ಗಿಸುವಂತೆ ಮಾಡಿದೆ. ಇಂತಹ ವಿಕೃತಿ ಹೊಂದಿರುವವ ಜನ ಪ್ರತಿನಿಧಿಯಾಗಿರುವುದು ಸಂಸತ್ತಿನ ಇತಿಹಾಸಕ್ಕೆ ಕಪ್ಪು ಚುಕ್ಕೆ. ನೈತಿಕ ಅಧಪತನದ ಪರಮಾವಧಿಯಿದು. ಇಂತಹ ಜನಪ್ರತಿನಿಧಿಯಿಂದ ಸಮಾಜ ದೇಶ ಹೇಗೆ ಉದ್ದಾರವಾದೀತು? ಹಿಂದೂ ಹೆಣ್ಣು ಮಕ್ಕಳ ವಕ್ತಾರರಂತೆ ಪೋಸು ಕೊಟ್ಟು ಮಾಧ್ಯಮಗಳ ಮುಂದೆ ನಾಲಗೆ ಹರಿಯ ಬಿಡುವ ಬಿಜೆಪಿಯ ವಾಕ್ಚತುರ ಹೋರಾಟಗಾರರು ಏಕೆ ಮೌನವೃತದಲ್ಲಿದ್ದಾರೆ? ಅಲ್ಪ ಸಂಖ್ಯಾತ ವರ್ಗದ ಯುವಕರಿಂದ ಲೈಂಗಿಕ ಅಪರಾಧ ನಡೆದರೆ ಮಾತ್ರ ಹೋರಾಟವೇ? ಈ ಸಂತ್ರಸ್ತ ಹೆಣ್ಮಕ್ಕಳ ಮಹಿಳೆಯರ ಪರ ಹೋರಾಡದೆ ಏಕೆ ಇವರೆಲ್ಲ ತೆಪ್ಪಗಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಅಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಪ್ರಶ್ನಿಸಿದ್ದಾರೆ.

ಅವರು ಮಾತನಾಡುತ್ತಾ, ಸಂತ್ರಸ್ತ ಮಹಿಳೆಯರು ಪ್ರಜ್ವಲ್ ಜೊತೆಗೆ ರೇವಣ್ಣನವರ ಮೇಲೆಯೂ ಆರೋಪ ಹೊರಿಸುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಬುಗಿಲೆದ್ದ ಪ್ರತಿಭಟನೆಗಳಿಂದ ಪಾರಾಗಲು ಕಾಟಾಚಾರದ ತನಿಖೆ ಯಾಗಬಾರದು. ಯಾಕೆಂದರೆ ಇಂತಹ ತನಿಖೆಗಳು ದಡ ಸೇರಿದ್ದು ವಿರಳ. ರಾಜ್ಯ ಸರ್ಕಾರದ ಗ್ಯಾರಂಟಿ ಹಣದಿಂದ ಗ್ರಾಮೀಣ ಹೆಣ್ಮಕ್ಳು ಅಡ್ಡ ದಾರಿ ಹಿಡಿಯುತ್ತಾರೆಂಬ ಅರ್ಥದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು ಮೊದಲು ತಮ್ಮ ಪರಿವಾರದ ಕಡೆಗೆ ತಿರುಗಿ ನೋಡಲಿ ನಂತರ ಬಡ ಹೆಣ್ಣುಮಕ್ಕಳ ಬಗ್ಗೆ ಮಾತನಾಡಲಿ. ಹೆಣ್ಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದ ಸತ್ಯಾಸತ್ಯತೆ ಹೊರ ಬರಲೇಬೇಕು. ತಪ್ಪು ಮಾಡಿ ದೇಶ ಬಿಟ್ಟು ವಿದೇಶಕ್ಕೆ ಪಲಾಯನ ಮಾಡುವುದು ಇಂದು ಸಾಮಾನ್ಯವಾಗಿದೆ. ಈ ವಿದೇಶ ಪಲಾಯನದಲ್ಲಿ ಯಾರದ್ದಾದರೂ ಪ್ರಭಾವ ಇದೆಯೇ ಎಂಬ ಕುರಿತೂ ತನಿಖೆ ಯಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories