UdupiPrime news

ಉಡುಪಿ| ದಲಿತ ಯುವಕನ ಶೂಟೌಟ್ ಪ್ರಕರಣ – ಮುಂದಿನ 15 ದಿನಗಳೊಳಗೆ ಬಂಧಿಸದಿದ್ದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಅರೆ ಬೆತ್ತಲೆ ಪ್ರತಿಭಟನೆ – ಸುಂದರ್ ಮಾಸ್ಟರ್ ಎಚ್ಚರಿಕೆ

ಉಡುಪಿ, ಮೇ 26: ಎರಡೂವರೆ ತಿಂಗಳ ಹಿಂದೆ ನಡೆದ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯ ದಲಿತ ಯುವಕ ಕೃಷ್ಣ ಶೂಟ್‌ಔಟ್ ಪ್ರಕರಣದ ಆರೋಪಿಗಳನ್ನು ಮುಂದಿನ 15 ದಿನಗಳೊಳಗೆ ಬಂಧಿಸದಿದ್ದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ವಿವಿಧ ಸಂಘಟನೆಗಳ ಸಹಯೋಗ ದೊಂದಿಗೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹತ್ಯೆ ನಡೆದು 2 ತಿಂಗಳು 21 ದಿನಗಳಾಗಿವೆ. ಆದರೆ ಹತ್ಯೆಯ ಆರೋಪಿ ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಸಂಪೂರ್ಣ ವಿಫಲ ಆಗಿದೆ. ಕೃಷ್ಣ ಯಾವುದೇ ಸಮಾಜ ವಿರೋಧಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದರಲ್ಲ. ಅವರ ವಿರುದ್ಧ ಯಾವುದೇ ಪ್ರಕರಣ ಕೂಡ ಇಲ್ಲ ಎಂದರು.

ದುಷ್ಕರ್ಮಿಗಳು ಕೊಲೆ ಮಾಡಿದ ಬಳಿಕ ಕೃಷ್ಣ ಅವರ ಮನೆಯಿಂದ ಕಬ್ಬಿಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಪೊಲೀಸರು ಈ ಪ್ರಕರಣ ವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ. ಈ ಕೃತ್ಯದಿಂದ ಜನ ಭಯಭೀತರಾಗಿದ್ದರೂ ಪೊಲೀಸ್ ಇಲಾಖೆ ಗಾಢ ವೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು. ಉಚ್ಚಿಲ ಬಡಾ ಗ್ರಾಮದಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ದಲಿತರ ಮೃತದೇಹ ಸುಡಲು ಅಡ್ಡಿಪಡಿಸುತ್ತಿರುವ ಜಿಲ್ಲಾಡಳಿತವು ಕಳೆದ ಹಲವು ವರ್ಷ ಗಳಿಂದ ರುದ್ರಭೂಮಿಯ ಕಾಮಗಾರಿಯನ್ನು ಪೂರ್ತಿಗೊಳಿಸದೆ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಕಾಮಗಾರಿಯ ಬಗ್ಗೆ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ದಲಿತರ ಮೀಸಲು ಭೂಮಿ ಯನ್ನು ಇತರ ವರ್ಗದವರು ಆಕ್ರಮಿಸಿಕೊಂಡರೂ ಕೂಡ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಯಾವುದೇ ದಲಿತ ದೌರ್ಜನ್ಯ ಪ್ರಕರಣಗಳನ್ನು ಸೀಮಿತ ಅವಧಿಯಲ್ಲಿ ಬಗೆಹರಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಡಿಸಿ, ಎಸ್ಪಿಯವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದರು. ಆದರೆ ಯಾವುದೇ ಪ್ರಕರಣಗಳಲ್ಲೂ ಉನ್ನತ ಅಧಿಕಾರಿಗಳನ್ನು ಹೊಣೆ ಮಾಡಿರುವುದು ಕಂಡು ಬಂದಿಲ್ಲ. ಮುಖ್ಯಮಂತ್ರಿಗಳ ಈ ಆದೇಶಗಳು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸಿದರು.

ಎಸ್‌ಸಿಎಸ್‌ಟಿಗಳು ಠಾಣೆಗೆ ದೂರು ಕೊಟ್ಟರೆ, ಅದಕ್ಕೆ ಪ್ರತಿಯಾಗಿ ದೂರು ನೀಡುವ ವ್ಯವಸ್ಥೆ ಕೆಲವು ದಿನಗಳಿಂದ ನಡೆಯುತ್ತಿದೆ. ದೌರ್ಜನ್ಯಕ್ಕೆ ಒಳಗಾದವರ ವಿರುದ್ಧವೇ ಪ್ರತಿದೂರು ನೀಡುವ ಮೂಲಕ ಇಡೀ ಪ್ರಕರಣವನ್ನೇ ದಿಕ್ಕು ತಪ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಶ್ಯಾಮ್ ರಾಜ್ ಬಿರ್ತಿ, ಮಂಜುನಾಥ್ ಗಿಳಿಯಾರು, ಶ್ಯಾಮ್ ಸುಂದರ್ ತೆಕ್ಕಟ್ಟೆ, ಕುಮಾರ್ ಕೋಟ, ವಾಸುದೇವ ಮುದೂರು, ಶಿವಣ್ಣ ಮೈಸೂರು, ಮಂಜುನಾಥ್ ಬಾಳ್ಕುದ್ರು, ಶಿವಾನಂದ ಬಿರ್ತಿ, ಸುರೇಶ್ ಬಿರ್ತಿ, ಶ್ರೀನಿವಾಸ ವಡ್ಡರ್ಸೆ ಉಪಸ್ಥಿತರಿದ್ದರು

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button