ಕರಾವಳಿ ಭಾಗದಲ್ಲಿ ಜೂ.15ರಿಂದ 18ರ ವರೆಗೆ ಗುಡುಗು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದ್ದು, “ಎಲ್ಲೋ ಅಲರ್ಟ್’ ಘೋಷಿಸ ಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ದ.ಕ., ಉಡುಪಿಯಲ್ಲಿ ಬುಧವಾರ ಮಳೆಯ ತೀವ್ರತೆ ಕಡಿಮೆ ಇತ್ತು. ಮಂಗಳೂರು ನಗರದಲ್ಲಿ ಬೆಳಗ್ಗೆ ಸಾಧಾರಣ ಮಳೆಯಾಗಿತ್ತು. ಜಿಲ್ಲೆ ಯಾದ್ಯಂತ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಬುಧವಾರ ಹಲವೆಡೆ ಸಾಧಾರಣ ಮಳೆಯಾಗಿದ್ದು, ಕಾಪು, ಕಾರ್ಕಳ ಭಾಗದಲ್ಲಿ ಹೆಚ್ಚು ಮಳೆಯಾಗಿದೆ.
ಮಳೆ ತುಸು ಬಿಡುವು ನೀಡಿದ ಹಿನ್ನೆಲೆ ಯಲ್ಲಿ ಸೆಕೆ ಮತ್ತೆ ಆರಂಭಗೊಂಡಿದ್ದು, ಗರಿಷ್ಠ ಉಷ್ಣಾಂಶ ವಾಡಿಕೆಗಿಂತ 2 ಡಿ.ಸೆ. ಹೆಚ್ಚು ಇತ್ತು. ಮಂಗಳೂರಿನಲ್ಲಿ 32 ಡಿ.ಸೆ. ಗರಿಷ್ಠ ಮತ್ತು 24.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಅರಬಿ ಸಮುದ್ರದಲ್ಲಿ ಸೃಷ್ಟಿಯಾದ ಬಿಪರ್‌ಜಾಯ್ ಚಂಡಮಾರುತ ತೀವ್ರತೆ ಪಡೆದುಕೊಳ್ಳುತ್ತಿದೆ. ಈಶಾನ್ಯ ದಿಕ್ಕಿನತ್ತ ಚಲಿಸಿ ಸೌರಾಷ್ಟ್ರ ಮತ್ತು ಕಚ್f ಪ್ರದೇಶದ ಮೂಲಕ ಹಾದುಹೋಗಲಿದೆ. ಜೂ.16ರ ವರೆಗೆ ಇದರ ತೀವ್ರತೆ ಇರುವ ಸಾಧ್ಯತೆ ಇದೆ.
ಕರಾವಳಿ ಭಾಗದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದಿಂದಾಗಿ ಪಶ್ಚಿಮ ಕರಾವಳಿಗೆ ಬಿಪರ್‌ಜಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಗಳು ಇದ್ದು ಅದರ ಪರಿಣಾಮದಿಂದ ಸಮುದ್ರದ ಅಲೆಗಳ ಎತ್ತರ 3ರಿಂದ 4 ಮೀ.ನಷ್ಟು ಇರಲಿದೆ. ಜೂ. 19ರ ವರೆಗೆ ಕರಾವಳಿ ತೀರದಲ್ಲಿ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಸ್ಥಳೀಯರು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ 24×7 ಕಂಟ್ರೋಲ್ ರೂಂ. ಟೋಲ್ ಫ್ರೀ ಸಂಖ್ಯೆ:1077 / 0824 2442590ಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.