ನೇಜಾರು ಕೊಲೆ ಪ್ರಕರಣ: ಡಾ. ಆರತಿ ಕೃಷ್ಣ ಭೇಟಿ | ಸಂತ್ರಸ್ಥ ಕುಟುಂಬದ ಬೇಡಿಕೆ ಸರಕಾರದ‌ ಗಮನಕ್ಕೆ ತರುವ ಆಶ್ವಾಸನೆ

ಉಡುಪಿ:ನೇಜಾರಿನ ತೃಪ್ತಿ ಲೇಔಟ್’ನಲ್ಲಿ ನಡೆದ ತಾಯಿ ಮತ್ತು ಮಕ್ಕಳ ಕೊಲೆ ನಡೆದ ಮನೆಗೆ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಇದರ ಉಪಾಧ್ಯಕ್ಷೆಯಾದ ಡಾ.ಆರತಿ ಕೃಷ್ಣ ಅವರು ಭೇಟಿ ನೀಡಿ ಸಂತ್ರಸ್ಥ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.

ಸಂತ್ರಸ್ಥ ಕುಟುಂಬದ ಸದಸ್ಯರಾದ ನೂರು ಮುಹಮ್ಮದ್, ಮೃತ ಹಸೀನಾರ ಸಹೋದರ ಅಶ್ರಫ್ ಅವರು ಡಾ. ಆರತಿ ಕೃಷ್ಣ ಅವರಿಗೆ ಮನವಿ ಸಲ್ಲಿಸಿ ವಿಶೇಷ ಪ್ರಾಸಿಕ್ಯೂಟರ್ ಮತ್ತು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ನಿರ್ಮಿಸಿ ಆರೋಪಿಗೆ ಶೀಘ್ರ ಶಿಕ್ಷೆಯಾಗುವಂತೆ ಮಾಡಿ ನ್ಯಾಯ ಕೊಡಿಸಲು ಸರಕಾರವನ್ನು ಒತ್ತಾಯಿಸುವಂತೆ ಈ ಸಂದರ್ಭದಲ್ಲಿ ವಿನಂತಿಸಿಕೊಂಡರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಡಾ.ಆರತಿ ಕೃಷ್ಣ, ” ಕೊಲೆ ನಡೆದ ಸಂದರ್ಭದಲ್ಲಿ ಮಧ್ಯಪ್ರದೇಶ ಚುನಾವಣೆಯ‌ ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿದ್ದ ಕಾರಣ ಇಲ್ಲಿ ಬರಲು ಸಾಧ್ಯವಾಗಿರಲಿಲ್ಲ. ಆದರೆ ಫೋನ್ ಮೂಲಕ ಎಲ್ಲ ವಿಚಾರ ತಿಳಿದುಕೊಳ್ಳುತ್ತಿದ್ದೆ. ಆತ ಬಂಧಿಸಲ್ಪಟ್ಟ ವಿಚಾರ ಕೂಡ ತಿಳಿಯಿತು. ಈ ಘಟನೆಯಿಂದ ಅನಿವಾಸಿ ಭಾರತೀಯರಿಗೆ ತಮ್ಮ ಕುಟುಂಬದ ಭದ್ರತೆ ಕೂಡ ಚಿಂತೆಯಾಗ ತೊಡಗಿದೆ. ಆ ನಿಟ್ಟಿನಲ್ಲಿ ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಕೂಡ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.

ಘಟನೆ ನಡೆದ ತಕ್ಷಣ ಸರಕಾರ ಶೀಪ್ರ ಕ್ರಮಕೈಗೊಂಡಿದ್ದಾರೆ. ಸಂತ್ರಸ್ಥ ಕುಟುಂಬದ ಮನವಿಗಳನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

“ಐದು ವರ್ಷದಲ್ಲಿ ಅನಿವಾಸಿ ಭಾರತೀಯ ಸಮಿತಿಯಲ್ಲಿ ಸದಸ್ಯರಿಲ್ಲದ ಕಾರಣ ಅನಿವಾಸಿ ಭಾರತೀಯರ ದತ್ತಾಂಶ ಸಂಗ್ರಹ ಸಾಧ್ಯವಾಗಿರಲಿಲ್ಲ. ಇದೀಗ ಅದನ್ನು ಸಂಗ್ರಹಿಸುತ್ತೇವೆ. ಆದರ ಆಧಾರದಲ್ಲಿ ಅವರ ಕುರಿತು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇವೆ. ಅದರೊಂದಿಗೆ ಅನಿವಾಸಿ ಭಾರತೀಯರಿಗೆ ಸಂಬಂಧಿಸಿದಂತೆ ಸಚಿವಾಲಯ ಕೂಡ ನಿರ್ಮಾಣ ಮಾಡುವ ಪ್ರಯತ್ನದಲ್ಲಿದ್ದೇವೆ” ಎಂದು ಹೇಳಿದರು.

ಕೊಲೆಯಾದ ಅಕ್ಕಪಕ್ಕದ ಮನೆಯಲ್ಲಿ ಸಿಸಿಟಿವಿ ಅಳವಡಿಕೆ:

ಕೊಲೆಯಾದ ನಂತರ ನೇಜಾರು ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೊಲೆಯಾದ ಮನೆಯ ಅಕ್ಕಪಕ್ಕದ ಮನೆಯವರೆಲ್ಲರು ಸಿಸಿಟಿವಿ ಅಳವಡಿಸುತ್ತಿದ್ದಾರೆ. ಘಟನೆಯ ನಂತರ ಸಿಸಿಟಿವಿಯ ಮಹತ್ವ ಜನರಿಗೆ ಅರ್ಥವಾಗುತ್ತಿದ್ದು ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಿಕೊಳ್ಳುತ್ತಿದ್ದಾರೆ.

Latest Indian news

Popular Stories