ಉಡುಪಿ: ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಶಿಕ್ಷಕರ ವರ್ಗಾವಣೆ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಒಟ್ಟು ಎಂಭತ್ತು ವಿದ್ಯಾರ್ಥಿಗಳು ಕಲಿಯುತ್ತಿದ್ದು ಈ ಮುಂಚೆ ಮೂರು ಶಿಕ್ಷಕರಿದ್ದರು. ಇದೀಗ ಅವರಲ್ಲಿ ಒರ್ವ ಶಿಕ್ಷಕರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದ್ದು ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಮುಖಂಡ ರಮೇಶ್ ತಿಂಗಳಾಯ, ಸರಕಾರಿ ಶಾಲೆಯನ್ನು ನೇರವಾಗಿ ಮುಚ್ಚದೆ ಹಿಂಬದಿಯಿಂದ ಮುಚ್ಚಲು ಪ್ರಯತ್ನಿಸಲಾಗುತ್ತಿದೆ. ಶಿಕ್ಷಣಾಧಿಕಾರಿಗಳಿಗೆ, ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಆಸಕ್ತಿ ಇದ್ದರೆ ಅವರು ಸರಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ದಿ ಪಡಿಸಲಿ ಅದು ಬಿಟ್ಟು ಶಿಕ್ಷಣವನ್ನು ಇಂದು ಉದ್ಯೋಗಕ್ಕಾಗಿ ಬಳಸಲಾಗುತ್ತಿದೆ ಇದು ಖೇದಕರ ಎಂದರು.
ಸರಕಾರಿ ಶಾಲೆಗೆ ಶಿಕ್ಷಕರನ್ನು ಕೊಡುತ್ತಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. ಈ ಮುಂಚೆ ಕೌನ್ಸಿಲಿಂಗ್ ನಡೆಸುವಾಗ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ನಮ್ಮನ್ನು ಬಂಧಿಸುವ ಪ್ರಯತ್ನ ನಡೆದಿತ್ತು. ನ್ಯಾಯಯುತವಾದ ಬೇಡಿಕೆಯಿಟ್ಟಾಗ ನಮ್ಮನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಮತ್ತೆ ನಮ್ಮ ಶಿಕ್ಷಕರೊಬ್ಬರನ್ನು ವರ್ಗಾವಣೆ ಮಾಡಲು ಸರಕಾರ ಮುಂದಾಗಿದೆ. ಎಂಭತ್ತು ಮಕ್ಕಳು ಎರಡು ಶಿಕ್ಷಕರಿಂದ ಕಲಿಯುವುದು ಹೇಗೆ ಎಂದು ಪ್ರಶ್ನಿಸಿದರು.
ನಮಗೆ ನ್ಯಾಯ ದೊರಕಿಸಿಕೊಡಬೇಕು. ಏಳು ಶಿಕ್ಷಕರು ಈ ಶಾಲೆಗೆ ಬರಬೇಕು. ಬಡ ಕೂಲಿ ಕಾರ್ಮಿಕರ ಮಕ್ಕಳು, ಮೀನುಗಾರರ ಮಕ್ಕಳು ಶಿಕ್ಷಣ ವಂಚಿತರಾಗುದರಿಂದ ತಡೆಯಬೇಕು. ಅಲ್ಲಿಯವರೆಗೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.
ಎರಡು ಗ್ರಾಮಕ್ಕೆ ಒಂದು ಶಾಲೆ!
ಉಡುಪಿ ಜಿಲ್ಲೆಯ ಬ್ರಹ್ಮಾವರ ವಲಯಕ್ಕೆ ಸಂಬಂದಪಟ್ಟ ಮೂರು ಕಡೆ ಜಲಾವತದಿಂದ ಅವ್ರತಗೊಂಡಿರುವ ಏಕೈಕ ಭೂ ಸಂಪರ್ಕ ಇರುವ ವಿಶೇಷ ಗ್ರಾಮವಾದ ನಮ್ಮ ಕೋಡಿ ಬೆಂಗೆ ಶಾಲೆಗೆ 98 ವರ್ಷ ಇತಿಹಾಸ ಇರುವ ಶಾಲೆಯಲ್ಲಿ ಈಗ ಕೇವಲ ಮೂರು ಜನ ಖಾಯಂ ಶಿಕ್ಷಕರಿದ್ದು 1ರಿಂದ 7ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆಯನ್ನು ಮಾಡುತ್ತಿದ್ದಾರೆ. ಆದರೆ, ಕಳೆದ ವರ್ಷದಿಂದ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ನೆಪ ಒಡ್ಡಿ ಮೂರು ಜನ ಶಿಕ್ಷಕರಲ್ಲಿ ಒಬ್ಬರನ್ನು ವರ್ಗಾವಣೆ ಮಾಡುವುದನ್ನು ಗ್ರಾಮದವರು ಮಕ್ಕಳ ಹಿತದೃಷ್ಟಿಯಿಂದ ಸಂಬಂಧ ಪಟ್ಟವರಿಗೆ ಮನವಿ ನೀಡಿ ವಿರೋಧ ವ್ಯಕ್ತಪಡಿಸಿದ್ದೇವೆ. ಆವಾಗ ವರ್ಗಾವಣೆಯ ಪ್ರಕ್ರಿಯೆ ತಾತ್ಕಾಲಿಕವಾಗಿ ಕೆಲವೊಂದು ಕಾರಣದಿಂದ ತಡೆಹಿಡಿದಿದ್ದೀರಿ. ತದನಂತರದಲ್ಲಿ ಈ ವರ್ಷದಲ್ಲಿ ಕೊರತೆ ಇರುವ ಶಿಕ್ಷಕರನ್ನು ನೀಡದೆ ಪಾರಂಭದ ಹಂತದಲ್ಲಿಯೇ ಕಳೆದ ವರ್ಷದಂತೆ ಪುನಃ ಹೆಚ್ಚುವರಿ ಶಿಕ್ಷಕರು ಎಂಬ ನೆಪ ಒಡ್ಡಿ ವರ್ಗಾವಣೆ ಪ್ರಕ್ರಿಯೆ ಪಾರಂಬಿಸುವ ಸೂಚನೆ ಸಿಕ್ಕಿರುತ್ತದೆ. ಇದರಿಂದ ಶಾಲೆಯ ಶೈಕ್ಷಣಿಕ ಸ್ಥಿತಿ ಮತ್ತಷ್ಟು ಕೆಳಗಿಳಿಯುತ್ತದೆ. ಇಂತಹ ಕಾನೂನುಗಳಿಂದ ಸರಕಾರಿ ಶಾಲೆ ಮುಚ್ಚುವಂತಾಗುತ್ತದೆ ಹೊರತು ಅಭಿವೃದ್ಧಿಯಾಗಲಾರದು. ಇದಕ್ಕೆ ಉದಾಹರಣೆಯಾಗಿ ನಮ್ಮ ಪಕ್ಕದ ಗ್ರಾಮವಾದ ಪಡುತೋನ್ಸೆ ಬೆಂಗ್ರೆಯಲ್ಲಿದ್ದ ಶಾಲೆಯು ಮುಚ್ಚಿರುತ್ತದೆ. ಈಗ ನಮ್ಮ ಎರಡೂ ಗ್ರಾಮಕ್ಕೆ ಇದೊಂದೇ ಶಾಲೆ ಉಳಿದಿರುವುದು, ನಾವು ಪೋಷಕರು ಶಿಕ್ಷಕರ ಮೇಲಿನ ಭರವಸೆಯಿಂದ ಹಾಗೂ ನಮ್ಮೂರ ಶಾಲೆಯ ಮಕ್ಕಳ ಸಂಖ್ಯೆ 21ಕ್ಕೆ ಇಳಿದು ಶಾಲೆ ಅಳಿವಿನ ಅಂಚಿನಲ್ಲಿರುವ ಸಮಯದಲ್ಲಿ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಿಂದ ಬಿಡಿಸಿ ಇಲ್ಲಿಗೆ ಸೇರ್ಪಡೆ ಮಾಡಿದ್ದರಿಂದ 21 ಇದ್ದ ಮಕ್ಕಳ ಸಂಖ್ಯೆ 72ಕ್ಕೆ ಏರಿತು, ತದನಂತರ ನಾಲ್ಕು ಖಾಯಂ ಶಿಕ್ಷಕರಲ್ಲಿ ಒಬ್ಬ ಶಿಕ್ಷಕರು ಬೇರೆ ಶಾಲೆಗೆ ವರ್ಗಾವಣೆಗೊಂಡು ಅವರ ಬದಲಿಗೆ ಇನ್ನೂ ಕೂಡ ಯಾವುದೇ ಶಿಕ್ಷಕರು ನಮ್ಮ ಶಾಲೆಗೆ ಬಂದಿರುವುದಿಲ್ಲ. ಅಲ್ಲದೆ 2020-2021ನೇ ಸಾಲಿನ ಸ್ಯಾಟ್ ಅಂಕಿ ಅಂಶದ ಪ್ರಕಾರ ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದುದರಿಂದ ಇದರ ಆಧಾರದ ಮೇಲೆ ಈಗ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಮಾಡುವುದು ಎಷ್ಟು ಸರಿ ? ಏಕೆಂದರೆ ಈಗ 22022-2023ರ ಸ್ಯಾಟ್ ಅಂಕಿ ಅಂಶದ ಪ್ರಕಾರ ಮಕ್ಕಳ ಸಂಖ್ಯೆ 67 ಇದೆ. ಶಿಕ್ಷಕರ ಕೊರತೆಯ ಕಾರಣದಿಂದ ನಮ್ಮ ಮಕ್ಕಳ ಭವಿಷ್ಯ ಚಿಂತಾಜನಕವಾಗಿದೆ ಹಾಗೂ ಊರಿನಲ್ಲಿರುವ ಒಂದೇ ಒಂದು ಶಾಲೆಯು ಮುಂದಿನ ದಿನಗಳಲ್ಲಿ ಮುಚ್ಚುವ ಸಂಭವವಿರುತ್ತದೆ ಆದುದರಿಂದ ತಾವು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಕೈಬಿಡಬೇಕು. ಅಲ್ಲದೆ ಇಲ್ಲಿ 1 ರಿಂದ 7ನೇ ತರಗತಿಯವರೆಗೆ ಇರುವುದರಿಂದ ಇನ್ನೂ 4 ಶಿಕ್ಷಕರನ್ನು ನೀಡಬೇಕು. ಅಲ್ಲದೆ ಈಗ ಶಿಕ್ಷಣದ ಇಲಾಖೆಯಲ್ಲಿರುವ ಕಾನೂನನ್ನು ಸರಕಾರಿ ಶಾಲೆಯನ್ನು ಉಳಿಸುವ ರೀತಿಯಲ್ಲಿ ಬದಲಾವಣೆ ಮಾಡಬೇಕೆಂದು ಪೋಷಕರಾದ ನಾವು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದಿದ್ದಾರೆ.
2021-22ರಲ್ಲಿ ವರ್ಗಾವಣೆಯಾದ ಶಿಕ್ಷಕರ ಬದಲಿಗೆ ಇನ್ನೋರ್ವ ಶಿಕ್ಷಕರನ್ನು ದಿನಾಂಕ 15/06/2023ರೊಳಗೆ ನೀಡದೆ ಇದ್ದಲ್ಲಿ 16/06/2023ರಿಂದ ಅನಿರ್ದಿಷ್ಟ ಕಾಲದವರೆಗೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು. ಇದರಿಂದಾಗುವ ಮಕ್ಕಳ ಶೈಕ್ಷಣಿಕ ತೊಂದರೆಗೆ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಸರಕಾರ ನೇರಾ ಹೊಣೆಯಾಗಲಿದೆ.
ಆದ್ದರಿಂದ ಶೈಕ್ಷಣಿಕವಾಗಿ ಇರುವ ಎಲ್ಲಾ ಕಾನೂನುನ್ನು ಮರುಪರಿಶೀಲಿಸುವವರೆಗೆ ವರ್ಗಾವಣೆ ಪ್ರಕ್ರಿಯೆಯನ್ನು ತಡೆ ಹಿಡಿದು ಶಾಲೆಯ ಉಳಿಯುಪಿಗಾಗಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.