ಹಿಂದುಳಿದ ವರ್ಗಗಳ ಆಯೋಗದ ವರದಿ ಬರುವ ಮೊದಲೇ ಅದು ಸರಿಯಿಲ್ಲ ಅಂತ ಹೇಗೆ ತೀರ್ಮಾನಿಸುತ್ತೀರಿ? – ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ನವೆಂಬರ್‌ ವರೆಗೆ ಇದ್ದ ನಮ್ಮ ಆಯೋಗದ ಅಧಿಕಾರಾವಧಿಯನ್ನು ಜನವರಿ ಕೊನೆಯವರೆಗೆ ಸರಕಾರ ವಿಸ್ತರಿಸಿದೆ. ಅಷ್ಟರೊಳಗೆ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಆ ಬಳಿಕವಷ್ಟೇ ರಾಜಕೀಯದ ಬಗ್ಗೆ ಗಮನ ಹರಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಕುಂದಾಪುರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಿಮ್ಮ ಹೆಸರು ಕೇಳಿ ಬರುತ್ತಿದೆ ಅನ್ನುವ ಪ್ರಶ್ನೆಗೆ ಉತ್ತರಿಸಿ, ನಾನೆಲ್ಲೂ ಈ ಬಗ್ಗೆ ಚರ್ಚಿಸಿಲ್ಲ. ಹೇಳಿಕೆಯನ್ನೂ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಏನೆಲ್ಲ ಆಗುತ್ತದೆ ಎಂದು ನೋಡೋಣ. ನಾನು ಈಗ ರಾಜಕೀಯ ಚರ್ಚೆ ಮಾಡಿದರೆ ಅದರ ಪರಿಣಾಮ ವರದಿ ಮೇಲೆ ಬೀಳುವ ಸಾಧ್ಯತೆಯೂ ಇದೆ ಎಂದರು.

ಹಿಂದುಳಿದ ವರ್ಗಗಳ ಆಯೋಗದ ವರದಿಯೇ ಇನ್ನೂ ಹೊರಗೆ ಬಂದಿಲ್ಲ. ಅದನ್ನು ಯಾರೂ ಓದಿಯೇ ಇಲ್ಲ. ಅದು ಬರುವ ಮೊದಲೇ ಅದು ಸರಿಯಿಲ್ಲ ಅಂತ ಹೇಗೆ ತೀರ್ಮಾನಿಸುತ್ತೀರಿ? ಈ ವರದಿಯಲ್ಲಿ ಇರುವುದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಷ್ಟೇ. ಅದರಲ್ಲಿ ಜಾತಿ ಗಣತಿ ಒಂದು ಅಂಶವಾಗಿದೆ ಎಂದರು.

Latest Indian news

Popular Stories