ಪುರೋಹಿತರಿಂದಲೇ ಧರ್ಮದ ಸಂರಕ್ಷಣೆ ಸಾಧ್ಯ |ಪುರೋಹಿತರು ಮಂತ್ರಗಳಿಂದ ಕಷ್ಟವನ್ನು ದೂರ ಮಾಡುತ್ತಾರೆ : ಪುತ್ತಿಗೆ ಶ್ರೀ

ಸಮಾಜದಲ್ಲಿ ಧರ್ಮ ಸ್ಥಾಪನೆಯಾಗಬೇಕಾದರೆ ಪುರೋಹಿತರ ಪಾತ್ರ ಬಹುಮುಖ್ಯವಾದದ್ದು.ಅನೇಕ ಸಮಸ್ಯೆಗಳು ಎದುರಾದಾಗ ಪುರೋಹಿತರು ಮಾರ್ಗದರ್ಶನವನ್ನು ನೀಡುತ್ತಾರೆ. ಕಷ್ಟದಲ್ಲಿರುವ ಜನಸಾಮಾನ್ಯರಿಗೆ ಪುರೋಹಿತರು ಮಂತ್ರಗಳಿಂದ ಕಷ್ಟವನ್ನು ದೂರ ಮಾಡುತ್ತಾರೆ. ಇಂತಹ ಪುರೋಹಿತರ ಸಂರಕ್ಷಣೆ ಈ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ. ಪುರೋಹಿತರ ಸಂರಕ್ಷಣೆಗಾಗಿ ವೈದಿಕ ಧರ್ಮದ ಪ್ರಚಾರಕ್ಕಾಗಿ ಎಲ್ಲರೂ ತಮ್ಮ ಮಕ್ಕಳನ್ನು ವಿದ್ಯಾಪೀಠಕ್ಕೆ ಸೇರಿಸಬೇಕು ಎಂದು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರತೀರ್ಥ ಹೇಳಿದರು.

ಅವರು ಇಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಶ್ರೀ ಪುತ್ತಿಗೆ ವಿದ್ಯಾಪೀಠದ 37ನೆಯ ಘಟಿಕೋತ್ಸವದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು.

ಇಂದಿನ ಯಾಂತ್ರಿಕ ವಾತಾವರಣದ ಪ್ರಭಾವದಲ್ಲಿ ಎಲ್ಲರೂ ಇಂಜಿನಿಯರಿಂಗ್ – ಮೆಡಿಕಲ್ ಮುಂತಾದ ಲೌಕಿಕ ಶಿಕ್ಷಣವನ್ನು ಬಯಸುತ್ತಿದ್ದಾರೆ. ಆದರೆ ಸ್ವಸ್ತಿ ಪ್ರಜಾಭ್ಯ: ಎಂದು ವಿಶ್ವದ ಕ್ಷೇಮವನ್ನು ನಿಸ್ವಾರ್ಥವಾಗಿ ಬಯಸುವವರು ಪುರೋಹಿತರು. ಇಂಥಹ ಪುರೋಹಿತರ ನಿರ್ಮಾಣ ಅತ್ಯಗತ್ಯವಾಗಿದೆ.
ಪುರೋಹಿತರ ನಿರ್ಮಾಣದಿಂದ ಘೋಷಣೆಯಿಂದ ದೇಶದಲ್ಲಿ ಧರ್ಮದ ಸ್ಥಾಪನೆಯಾಗುತ್ತದೆ. ಇಂತಹ ಪುರೋಹಿತರ ನಿರ್ಮಾಣದ ಪ್ರಧಾನ ಆಶಯದೊಂದಿಗೆ ನಾವು ಶ್ರೀ ಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪನೆ ಮಾಡಿದೆವು.

ಈಗ ದೇಶವಿದೇಶಗಳ ನೂರಾರು ಶಾಖೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಧರ್ಮ ಪ್ರಚಾರದಲ್ಲಿ ನಿರತರಾಗಿರುವುದು ನಮಗೆ ಸಂತಸ ತಂದಿದೆ. ಪ್ರಕೃತ 37ನೆಯ ಘಟಕೋತ್ಸವದಲ್ಲಿ ಮಂಗಳವನ್ನು ಆಚರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅಧ್ಯಯನವನ್ನು ನಡೆಸಿ ಸಮಾಜದಲ್ಲಿ ಉತ್ತಮ ವಿದ್ವಾಂಸರಾಗಿ ಯಶಸ್ಸನ್ನು ಕಾಣುವಂತಾಗಲಿ ಎಂದು ಹಾರೈಸಿದರು.

ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೀಕಣ್ವ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಪುತ್ತಿಗೆ ಮಠದ ಕಿರಿಯಪಟ್ಟದ ಪರಮಪೂಜ್ಯ ಶ್ರೀ ಸುಶ್ರೇಂದ್ರ ತೀರ್ಥ ಶ್ರೀಪಾದಂಗಳವರು ಮಂಗಳದ ವಿದ್ಯಾರ್ಥಿಗಳಿಗೆ ಉಪದೇಶವನ್ನು ಮಾಡಿ ಅನುಗ್ರಹಿಸಿದರು.


ಮಂಗಳೂರಿನ ಕದ್ರಿ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಶ್ರೀ ಪ್ರಭಾಕರ ಅಡಿಗರು ಸಂಪಾದಿಸಿರುವ “ಉದಕ ಶಾಂತಿ* ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.


ಈ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯರು , ಶತಾವಧಾನಿ ರಾಮನಾಥ ಆಚಾರ್ಯ ಉಡುಪಿ, ವಿದ್ವಾನ್ ಪ್ರಕಾಶಾಚಾರ್ಯ ಮುಂಬಯಿ , ವಿದ್ವಾನ್ ರಾಮದಾಸ ಉಪಾಧ್ಯಾಯ ಮುಂಬೈ, ವಿದ್ವಾನ್ ರಾಜೇಶ್ ಭಟ್ ಮುಂಬೈ, ವಿದ್ವಾನ್ ಪ್ರವೀಣಾಚಾರ್ಯ , ಚೆನ್ನೈ , ವಿದ್ವಾನ್ ಶ್ರೀ ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯರು ,ವಿದ್ವಾನ್ ಶ್ರೀ ಶ್ರೀನಿವಾಸಾಚಾರ್ಯ ಹೊನ್ನೆದಿಬ್ಬ ಬೆಳಗಾಂ ,ವಿದ್ವಾನ್ ಶ್ರೀ ವಿಜಯಸಿಂಹಾಚಾರ್ಯ ತೋಟಂತಿಲ್ಲಾಯ , ವಿದ್ವಾನ್ ಶ್ರೀಪತಿ ಆಚಾರ್ಯ , ಪಾಡಿಗಾರು , ವಿದ್ವಾನ್ ಶ್ರೀ ಪಂಜ ಭಾಸ್ಕರ್ ಭಟ್ , ವಿದ್ವಾನ್ ಕೇಂಜ ಶ್ರೀಧರ ತಂತ್ರಿ, ವಿದ್ವಾನ್ ಶ್ರೀಧರ ಉಪಾಧ್ಯಾಯ ಕುಂಭಾಶಿ, ಶಿಕ್ಷಣ ತಜ್ಞರಾದ ಶ್ರೀ ರೋಹಿತ್ ಚಕ್ರತೀರ್ಥ ಮತ್ತು ಅನೇಕ ಜಿಜ್ಞಾಸುವೃಂದ ಭಾಗವಹಿಸಿದ್ದರು.

ಶ್ರೀಪುತ್ತಿಗೆ ವಿದ್ಯಾಪೀಠದ ಪ್ರಾಚಾರ್ಯರಾದ ವಿದ್ವಾನ್ ಶ್ರೀನಿಧಿ ಆಚಾರ್ಯರು ಸ್ವಾಗತಿಸಿದರು. ಡಾ.ಬಿ.ಗೋಪಾಲಾಚಾರ್ಯರು ಶ್ರೀ ಪುತ್ತಿಗೆ ವಿದ್ಯಾಪೀಠದ ಸಾಧನೆಗಳ ಪರಿಚಯವನ್ನು ಮಾಡಿದರು.ವಿದ್ವಾನ್ ಯೋಗೀಂದ್ರ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Latest Indian news

Popular Stories