Udupi

ಉಡುಪಿಯ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಪ್ರಕರಣಕ್ಕೆ ಕೋಮು ಬಣ್ಣ ಬಳೆಯುವ ಷಡ್ಯಂತ್ರ ಖಂಡನೀಯ: ಎಸ್.ಐ.ಓ ಉಡುಪಿ ಜಿಲ್ಲೆ

ಉಡುಪಿ: ಉಡುಪಿಯ ಕಾಲೇಜೊಂದರಲ್ಲಿ ಮೂವರು ವಿದ್ಯಾರ್ಥಿನಿಯರು ತನ್ನ ಸಹಪಾಠಿ ಗೆಳತಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿ ವ್ಯಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾದ ಪ್ರಕರಣವನ್ನು ರಾಜಕೀಯಕ್ಕೆ ಎಳೆದು ತಂದು ಅದಕ್ಕೆ ಕೋಮು ಬಣ್ಣ ಬೆಳೆದು ಕೋಮು ಧೃವೀಕರಣದ ರಾಜಕೀಯ ಮಾಡಲು ಹವಣಿಸುತ್ತಿರುವ ರಾಜಕೀಯ ಪಕ್ಷದ ಮತ್ತು ಕೋಮುವಾದಿ ಸಂಘಟನೆಗಳ ನಡೆಯು ಖಂಡನೀಯ ಎಂದು ಎಸ್.ಐ.ಓ ಉಡುಪಿ ಜಿಲ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯರ ಹುಡುಗಾಟಿಕೆಯ ಕೃತ್ಯವು ವಿಷಾದನೀಯ ಮತ್ತು ಇದು ಅತ್ಯಂತ ಬೇಜವಾಬ್ದಾರಿಯುತ ವರ್ತನೆಯಾಗಿದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾಲೇಜಿನ ಆಡಳಿತ ಮಂಡಳಿಯು ಸಂಬಂಧಿಸಿದ ವಿಡಿಯೋ ಅನ್ನು ತಕ್ಷಣ ಡಿಲೀಟ್ ಮಾಡಿಸಿ, ತಮಾಷೆಗಾಗಿ ವಿಡಿಯೋ ಮಾಡಿದ ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿ ಕಾಲೇಜಿನಿಂದ ಅಮಾನತು ಮಾಡಿದ್ದು, ಈ ಕ್ರಮವು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯುತ ನಡೆಯಾಗಿದೆ.

ಪೋಲಿಸ್ ಇಲಾಖೆಯು ಪ್ರಕರಣದ ಈವರೆಗಿನ ತನಿಖೆಯಲ್ಲಿ ಶೌಚಾಲಯದಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಅಳವಡಿಸಲಾಗಿಲ್ಲ ಮತ್ತು ಬ್ಲ್ಯಾಕ್ ಮೇಲ್ ಮಾಡಲಾಗಿಲ್ಲ ಹಾಗೂ ಇದರ ಹಿಂದೆ ಯಾವುದೇ ಷಡ್ಯಂತ್ರ ಇಲ್ಲ ಎಂಬ ವಿಚಾರವನ್ನು ತಿಳಿಸಿದ್ದು, ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂಬ ಸತ್ಯಾಂಶವನ್ನು ತಿಳಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿರುವುದು ಸ್ವಾಗತಾರ್ಹ.

ಈ ಪ್ರಕರಣದ ಮೇಲ್ವಿಚಾರಣೆಗಾಗಿ ಬಂದಿರುವ
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಹಾಗೂ ಬಿಜೆಪಿ ನಾಯಕಿ ಖುಷ್ಬು ಅವರು ಸಹ ಈ ಪ್ರಕರಣಕ್ಕೆ ಕೋಮು ಬಣ್ಣ ಬಳೆಯಬೇಡಿ ಎಂಬ ಸಂದೇಶವನ್ನು ನೀಡಿದ್ದಾರೆ.

ವಿಡಿಯೋ ಚಿತ್ರೀಕರಣಕ್ಕೆ ಒಳಗಾದವರು ಎನ್ನಲಾದ ವಿದ್ಯಾರ್ಥಿನಿಯರ ವ್ಯಕ್ತಿ ಘನತೆಯನ್ನು ಖಾತರಿಪಡಿಸಬೇಕು ಎಂದು ಎಸ್.ಐ.ಓ ಉಡುಪಿ ಜಿಲ್ಲೆ ಒತ್ತಾಯಿಸುತ್ತದೆ.

ಇಂತಹ ಸಂದರ್ಭದಲ್ಲಿ ಸಾಮಾಜಿಕ ಸ್ವಾಸ್ಥ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕರೆ ನೀಡುತ್ತೇವೆ, ಈ ಬಗ್ಗೆ ಸುಳ್ಳು ಸುದ್ದಿ ಹರಡುವ ಮೂಲಕ ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಕೆಡಿಸಲು ಯತ್ನಿಸುತ್ತಿರುವ ರಾಜಕೀಯ ಪಕ್ಷಗಳ ಮತ್ತು ಕೋಮುವಾದಿ ಸಂಘಟನೆಗಳ ಪ್ರಚೋದನೆಯಿಂದ ಸಾರ್ವಜನಿಕರು ಅಂತರ ಕಾಯ್ದುಕೊಳ್ಳಬೇಕೆಂದು ಮನವಿ ಮಾಡುತ್ತೇವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button